ದಲಿತ ಸಮುದಾಯದವರು ಸಿಎಂ ಆಗಲು ಕಾಂಗ್ರೆಸ್‌ನಲ್ಲಿ ಮಾತ್ರ ಸಾಧ್ಯ. ದಲಿತರು ಸಿಎಂ ಆದರೆ ಎಲ್ಲರೂ ಸಂತೋಷಡುತ್ತಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಈ ಹಿಂದೆಯೇ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗುತ್ತಿದ್ದರು. ಆದರೆ ಆಗ ನಮಗೆ ಹೆಚ್ಚು ಸ್ಥಾನಗಳು ಸಿಗಲಿಲ್ಲ. ಹಾಗೊಂದು ವೇಳೆ ಸ್ಥಾನಗಳು ಬಂದಿರುತ್ತಿದ್ದರೆ ಹಿಂದೆಯೇ ದಲಿತ ಸಿಎಂ ಆಗುತ್ತಿದ್ದರು. ಕಾಂಗ್ರೆಸ್ ನಿಂದ ಮಾತ್ರ ದಲಿತ ಸಿಎಂ ಆಗಲು ಅವಕಾಶ ಇದೆ” ಎಂದರು.
“ಹೈಕಮಾಂಡ್ ಸೂಚಿಸಿದರೆ ಸಚಿವರು, ಶಾಸಕರು ಯಾರೇ ಆದರೂ ಸ್ಪರ್ಧಿಸಲು ಸಿದ್ಧವಾಗಿ ಇರಬೇಕಾಗುತ್ತದೆ. ನಮ್ಮ ತಯಾರಿ ನಾವು ಮಾಡುತ್ತಿದ್ದೇವೆ. ಇನ್ನೂ ಎರಡು, ಮೂರು ಹಂತಗಳಲ್ಲಿ ಪಟ್ಟಿ ಪ್ರಕಟವಾಗಲಿದೆʼ ಎಂದು ಹೇಳಿದರು.
“ಕರ್ನಾಟಕದಲ್ಲಿ ಹೆಚ್ಚು ಸ್ಥಾನಗಳು ಬರಬೇಕು ಎಂಬ ಗುರಿ ಇದೆ. ಜನರ ಜೊತೆ ಯಾರು ಒಳ್ಳೆಯ ಹೆಸರು ತೆಗೆದುಕೊಂಡಿದ್ದಾರೋ ಅವರೇ ಸ್ಪರ್ಧಿಸಬೇಕಾಗುತ್ತದೆ. ವರಿಷ್ಠರು ಯಾವುದೇ ತೀರ್ಮಾನ ತೆಗೆದುಕೊಂಡರೂ ನಾವು ಸಿದ್ದ ಆಗಿರಬೇಕಾಗುತ್ತದೆ” ಎಂದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಡಾ. ಮಂಜುನಾಥ್ ಇಲ್ಲವೇ ಯಾರನ್ನೇ ಕಣಕ್ಕಿಳಿಸಿದರೂ ನಮಗೆ (ಕಾಂಗ್ರೆಸ್) ಭಯ ಇಲ್ಲ. ರಾಜಕೀಯ ಎಂದು ಬಂದಾಗ ಹೋರಾಟ ಇದ್ದಿದ್ದೆ” ಎಂದು ತಿಳಿಸಿದರು.
ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಯಾರೇ ಸ್ಪರ್ಧಿಸಲಿ. ನಮಗೆ ಯಾರನ್ನು ನಿಲ್ಲಿಸಿದರೂ ಭಯ ಇಲ್ಲ. ಡಾ. ಮಂಜುನಾಥ್ ಅವರ ಬಗ್ಗೆ ಗೌರವ ಇದೆ. ವೃತ್ತಿಯಲ್ಲಿ ನಮ್ಮ ಸರ್ಕಾರ ಕೂಡ ಅವರಿಗೆ ಸಹಕಾರ ನೀಡಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಮಂಜುನಾಥ್ ಅವರನ್ನು ವೃತ್ತಿಯಲ್ಲಿ ಮುಂದುವರಿಸಿದ್ದರು. ಈಗಲೂ ಮತ್ತೆ ನಮ್ಮ ಸರ್ಕಾರ ಬಂದ ಮೇಲೆಯೂ ಅವರನ್ನು ಮುಂದುವರೆಸಲಾಗಿತ್ತು. ಅವರಿಗೆ ಎಲ್ಲ ಗೌರವವನ್ನೂ ಕೊಟ್ಟಿದ್ದೇವೆ. ಆದರೆ, ರಾಜಕೀಯ ಎಂದು ಬಂದಾಗ ನೋಡೋಣ” ಎಂದರು.
ಎಚ್. ಡಿ. ದೇವೇಗೌಡ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ದಿನೇಶ್, “ಕಲುಷಿತ ವ್ಯವಸ್ಥೆಯಲ್ಲಿ ಮಂಜುನಾಥ್ ರಾಜಕೀಯಕ್ಕೆ ಬರುವುದು ಬೇಡ ಎಂದು ದೇವೇಗೌಡರು ಹೇಳಿದ್ದಾರೆ. ಹಾಗಾದರೆ ಕುಮಾರಸ್ವಾಮಿ ಕಲುಷಿತನಾ? ರೇವಣ್ಣ ಕಲುಷಿತನಾ? ಮಂಜುನಾಥ್ ಅವರು ವೃತ್ತಿಯಲ್ಲಿ ಹೆಸರು ಮಾಡಿದ್ದಾರೆ. ರಾಜಕೀಯವಾಗಿ ಹೆಸರು ಕಳೆದುಕೊಳ್ಳೋದು ಬೇಡ ಎಂಬ ಉದ್ದೇಶದಿಂದ ಹೇಳಿರಬಹುದು” ಎಂದು ಹೇಳಿದರು.