Homeಕರ್ನಾಟಕ'ದಲಿತ್ ವಾಯ್ಸ್' ನಿಯತಕಾಲಿಕದ ಸಂಪಾದಕ ವಿ ಟಿ ರಾಜಶೇಖ‌ರ್ ನಿಧನ, ಸಿಎಂ ಸಂತಾಪ

‘ದಲಿತ್ ವಾಯ್ಸ್’ ನಿಯತಕಾಲಿಕದ ಸಂಪಾದಕ ವಿ ಟಿ ರಾಜಶೇಖ‌ರ್ ನಿಧನ, ಸಿಎಂ ಸಂತಾಪ

ಖ್ಯಾತ ಪತ್ರಕರ್ತ, ಲೇಖಕ, ಚಿಂತಕ ಹಾಗೂ ‘ದಲಿತ್ ವಾಯ್ಸ್’ ನಿಯತಕಾಲಿಕದ ಸ್ಥಾಪಕ ಸಂಪಾದಕ ವಿ ಟಿ ರಾಜಶೇಖ‌ರ್ (93) ಅವರು ಬುಧವಾರ ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕೆಲವು ವರ್ಷಗಳಿಂದ ಮಂಗಳೂರಿನ ಶಿವಭಾಗ್‌ನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದ ಅವರು ಇತ್ತೀಚಿಗೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ರಾಜಶೇಖರ್ ಅವರ ಅಂತಿಮ ಸಂಸ್ಕಾರ ಉಡುಪಿಯ ಓಂತಿಬೆಟ್ಟುವಿನಲ್ಲಿ ಗುರುವಾರ ನಡೆಯಲಿದೆ.

ಇಂಡಿಯನ್ ಎಕ್ಸ್‌ ಪ್ರೆಸ್ ನಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಅವರು ಬಳಿಕ ದಲಿತರ ಧ್ವನಿಯಾಗಿ ಕೆಲಸ ಮಾಡಲು 1981ರಲ್ಲಿ ದಲಿತ್ ವಾಯ್ಸ್ ನಿಯತಕಾಲಿಕ ಪ್ರಾರಂಭಿಸಿದ್ದರು. ದೇಶಾದ್ಯಂತ ದಲಿತ್ ವಾಯ್ಸ್ ಹಾಗೂ ಅದರಲ್ಲಿ ಪ್ರಕಟಿತ ಅವರ ಬರಹಗಳು ಭಾರೀ ಚರ್ಚೆಗೆ ಒಳಗಾಗುತ್ತಿದ್ದವು.

ಮೀಸಲಾತಿ ಹಾಗೂ ದಲಿತರ ಹಕ್ಕುಗಳ ಪ್ರಬಲ ಪ್ರತಿಪಾದಕರಾಗಿದ್ದ ರಾಜಶೇಖರ್ ಅವರು ಬ್ರಾಹ್ಮಣ್ಯ ಹಾಗೂ ಸಂಘ ಪರಿವಾರದ ಕಟು ಟೀಕಾಕಾರರಾಗಿದ್ದರು. ಹತ್ತಾರು ಮಹತ್ವದ ಕೃತಿಗಳನ್ನು ರಚಿಸಿರುವ ವಿ ಟಿ ರಾಜಶೇಖರ್ ಅವರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿ, ಗೌರವಗಳಿಗೆ ಪಾತ್ರರಾಗಿದ್ದಾರೆ. ರಾಜಶೇಖ‌ರ್ ಅವರ ಪತ್ನಿ ಈ ಹಿಂದೆಯೇ ನಿಧನರಾಗಿದ್ದು, ಪುತ್ರ ಸಲೀಲ್ ಶೆಟ್ಟಿ ಆ್ಯಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಸಿಎಂ ಸಿದ್ದರಾಮಯ್ಯ ಸಂತಾಪ

ಪ್ರಖ್ಯಾತ ಪತ್ರಕರ್ತ, ಪ್ರಖರ ಚಿಂತಕ ಹಾಗೂ ಹೋರಾಟಗಾರ ವಿ.ಟಿ.ರಾಜಶೇಖರ್ ಅವರ ನಿಧನದಿಂದ ಆಘಾತಕ್ಕೀಡಾಗಿದ್ದೇನೆ. ಪತ್ರಿಕಾ ವೃತ್ತಿಯನ್ನು ಒಬ್ಬ ಹೋರಾಟಗಾರನಾಗಿಯೇ ಮುನ್ನಡೆಸಿದ್ದ ರಾಜಶೇಖರ್, ಜಾತಿ ವ್ಯವಸ್ಥೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಸದಾ ಸಿಡಿಯುತ್ತಿದ್ದವರು ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿ ಟ್ವೀಟ್‌ ಮಾಡಿದ್ದಾರೆ.

“ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ನಂತರ ಅಲ್ಲಿಂದ ಹೊರಬಂದು 1981ರಲ್ಲಿ ದಲಿತ್ ವಾಯ್ಸ್ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಆ ದಿನಗಳಿಂದಲೇ ಪರಿಚಿತರಾಗಿದ್ದ ರಾಜಶೇಖರ್ ಅವರು ಒಬ್ಬ ಹಿರಿಯ ಹಿತೈಷಿಯಾಗಿ ನನಗೆ ಮಾರ್ಗದರ್ಶನ ನೀಡುತ್ತಿದ್ದವರು. ರಾಜಶೇಖರ್ ಅವರ ಸಾವು ಸಮಾಜಕ್ಕೆ ದೊಡ್ಡ ನಷ್ಟ ಮಾತ್ರವಲ್ಲ, ಅವರಂತಹ ಜನಪರ ಚಿಂತಕರ ನಿಧನದಿಂದ ಸೃಷ್ಟಿಯಾಗಿರುವ ನಿರ್ವಾತವನ್ನು ತುಂಬುವುದು ಕೂಡಾ ಕಷ್ಟ. ತಂದೆಯನ್ನು ಕಳೆದುಕೊಂಡ ಆ್ಯಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ, ಮಗ ಸಲೀಲ್ ಶೆಟ್ಟಿ, ಕುಟುಂಬ ವರ್ಗ ಮತ್ತು ಅಭಿಮಾನಿಗಳ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ” ಎಂಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments