ದಲಿತ-ಬಂಡಾಯ ಕವಿ, ಸಂಶೋಧಕ, ವಿಮರ್ಶಕ, ಸಂಘಟನಾಕಾರ, ಅನುವಾದಕಾರ ಲಕ್ಕೂರು ಸಿ ಆನಂದ ಅವರು ಭಾನುವಾರ ರಾತ್ರಿ (ಮೇ 20) ಕಲಬುರಗಿ ಜಿಲ್ಲೆಯಲ್ಲಿ ಕಡಗಂಚಿ ಗ್ರಾಮದಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಿಧನರಾಗಿದ್ದಾರೆ.
44 ವರ್ಷ ಪ್ರಾಯದ ಲಕ್ಕೂರು ಸಿ. ಆನಂದ ಅವರು ಮೂಲತಃ ಕೋಲಾರ ಜಿಲ್ಲೆಯ ಲಕ್ಕೂರಿನವರು. ದಲಿತ- ಬಂಡಾಯ ಕಾವ್ಯ ಮಾರ್ಗದ ಮೂರನೇ ತಲೆಮಾರಿನವರು.
ಕವಿ, ವಿಮರ್ಶಕ, ಅನುವಾದಕರಾಗಿಯೂ ಗುರುತಿಸಿಕೊಂಡಿರುವ ಆನಂದ ಅವರ ಮಾತೃಭಾಷೆ ತೆಲುಗು. ಲಕ್ಕೂರು ಆನಂದ ಅವರು ಇದುವರೆಗೆ ಐದು ಕವನ ಸಂಕಲನ, ಐದು ಅನುವಾದಿತ ಕೃತಿಗಳು ಹಾಗೂ ಒಂದು ಸಂಶೋಧನಾ ಗ್ರಂಥವನ್ನು ಹೊರತಂದಿದ್ದಾರೆ. ಮಾತಂಗ ಮಾದಿಗರ ಸಂಸ್ಕೃತಿಯ ಬಗ್ಗೆ ಆನಂದ ಅವರು ಆಳವಾದ ಅಧ್ಯಯನ ನಡೆಸಿದ್ದಾರೆ.
ಇತ್ತೀಚೆಗೆ ತೆಲುಗು ಭಾಷೆಯಿಂದ ಕನ್ನಡಕ್ಕೆ ಅನುವಾದವಾದ ರಾಣಿ ಶಿವ ಶಂಕರ ಶರ್ಮರ ‘ಕೊನೆಯ ಬ್ರಾಹ್ಮಣ’ ಕೃತಿ ಇದೀಗ ಅಭಿನವ ಪ್ರಕಾಶನದಿಂದ ಕನ್ನಡದಲ್ಲಿ ಪ್ರಕಟವಾಗಿದೆ. ಲಕ್ಕೂರು ಆನಂದ ಅವರೇ ತೆಲುಗು ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ, ಆಂಧ್ರದ ಶ್ರೀ ಶ್ರೀ ಕಾವ್ಯ, ದೆಹಲಿಯ ದಲಿತ ಸಾಹಿತ್ಯ ಪರಿಷತ್ತು ಪ್ರಶಸ್ತಿ, ದು ನಿಂ ಬೆಳಗಲಿ ಪ್ರಶಸ್ತಿ, ವಿಭಾ ಸಾಹಿತ್ಯ ಪ್ರಶಸ್ತಿ, ಕಡೆಂಗೋಡ್ಲು ಶಂಕರಭಟ್ಟ ಪ್ರಶಸ್ತಿ, ಡಾ ತಿಪ್ಪೇರುದ್ರ ಸ್ವಾಮಿ ಪ್ರಶಸ್ತಿ ಆನಂದರಿಗೆ ಸಂದಿದೆ. ತಮಗೆ ಬಂದ ಪ್ರಶಸ್ತಿಗಳನ್ನು ಅವರು, ‘ರಾಜ್ಯದ ಎಲ್ಲಾ ದಮನಿತ ಸಮುದಾಯಗಳಿಗೆ’ ಅರ್ಪಿಸಿದ್ದಾರೆ.
ಊರಿಂದ ಊರಿಗೆ, ಇಪ್ಪತ್ತರ ಕಲ್ಲಿನ ಮೇಲೆ, ಬಟವಾಡೆಯಾಗದ ರಸೀತಿ, ಇತಿ ನಿನ್ನ ವಿಧೇಯನು, ಉರಿವ ಏಕಾಂತ ದೀಪ ಇವರ ಕವನ ಸಂಕಲನಗಳು. ಸ್ಮೃತಿ ಕಿಣಾನ್ತಂ, ಕೊನೆ ಬ್ರಾಹ್ಮಣ, ಆಕಾಶ ದೇವರ, ನಗ್ನ ಮುನಿಯ ಸಮಗ್ರ ಕಥೆಗಳು, ಅರುದ್ರ ಇವರ ಅನುವಾದಿತ ಕೃತಿಗಳು.