2019ರಲ್ಲಿ ಭೂಮಿ ದಾಖಲೆ ವರ್ಗಾವಣೆ ಮಾಡುವ ಸಲುವಾಗಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದವರಿಂದ ರೆಡ್‌ಹ್ಯಾಂಡ್ ಆಗಿ ಬಂಧಿಸಲ್ಪಟ್ಟ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯೊಬ್ಬರಿಗೆ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ.
ಕಡಬ ತಾಲೂಕಿನ ಐತ್ತೂರು ಗ್ರಾಪಂನಲ್ಲಿ ಪಿಡಿಒ ಆಗಿದ್ದ ಪ್ರೇಮ್‌ಸಿಂಗ್ ನಾಯ್ಕ್ ಶಿಕ್ಷೆಗೊಳಗಾದವರು. ಐತ್ತೂರು ಗ್ರಾಮದ ಶಾಹುಲ್ ಹಮೀದ್ ಎಂಬವರು ತನ್ನ ತಾಯಿಯ ಹೆಸರಿನಿಂದ ತನ್ನ ಹೆಸರಿಗೆ ಭೂಮಿಯನ್ನು ವರ್ಗಾಯಿಸಲೆಂದು ಗ್ರಾಪಂಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪಿಡಿಒ ಪ್ರೇಮ್‌ಸಿಂಗ್ ನಾಯ್ಕ್ ಎಂಬವರು 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
2019ರ ಮೇ 21ರಂದು ಶಾಹುಲ್ ಹಮೀದ್ ಅವರು 2 ಸಾವಿರ ರೂ.ಗಳನ್ನು ಪಿಡಿಒ ಕೈಯಲ್ಲಿ ಹಾಗೂ 8 ಸಾವಿರ ರೂ.ಗಳನ್ನು ಪಿಡಿಒ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು. ಆದರೆ, ನಂತರ ಇನ್ನೂ 10 ಸಾವಿರ ರೂ. ಲಂಚಕ್ಕೆ ಪಿಡಿಒ ಬೇಡಿಕೆ ಇರಿಸಿದಾಗ ಶಾಹುಲ್ ಹಮೀದ್‌ರವರು ಮಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಜೂ.3ರಂದು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಪಿಡಿಒ ಪ್ರೇಮ್ ಸಿಂಗ್ ನಾಯ್ಕ್ ಅವರನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದರು. ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ಮಂಗಳೂರಲ್ಲಿ ಕಲಂ 7(ಎ) ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ-1988 (ತಿದ್ದುಪಡಿ ಕಾಯಿದೆ 2018) ಅಡಿ ಪ್ರಕರಣ ದಾಖಲಾಗಿತ್ತು.
ಅಂದಿನ ಲೋಕಾಯುಕ್ತ ನಿರೀಕ್ಷಕ ಶ್ಯಾಮಸುಂದರ್ ಹೆಚ್.ಎಂ ಅವರು ತನಿಖಾಧಿಕಾರಿಯಾಗಿದ್ದು,ಆರೋಪಿ ವಿರುದ್ಧ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಡಿ.13ರಂದು ಆರೋಪಿ ಪ್ರೇಮ್‌ಸಿಂಗ್ ನಾಯ್ಕಗೆ 3 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ 50,000 ರೂ. ದಂಡ ವಿಧಿಸಿದೆ. ಆರೋಪಿ ದಂಡ ಕಟ್ಟಲು ವಿಫಲನಾದಲ್ಲಿ ಮತ್ತೆ 1 ತಿಂಗಳ ಕಾಲ ಸಾದಾ ಜೈಲು ಅನುಭವಿಸುವಂತೆ ಆದೇಶಿಸಿದೆ.