ಬಂಗಾಳಕೊಲ್ಲಿಯಲ್ಲಿ ಭುಗಿಲೆದ್ದಿರುವ ‘ಮೊಂತಾ’ ಚಂಡಮಾರುತ ರಭಸದಿಂದ ಆಂಧ್ರಪ್ರದೇಶ, ಒರಿಸ್ಸಾ ಕರಾವಳಿ ಪ್ರದೇಶದತ್ತ ಧಾವಿಸುತ್ತಿದೆ. ಈ ಚಂಡಮಾರುತವು ತೀವ್ರಗೊಂಡು ಭಾರತದ ಪೂರ್ವ ಕರಾವಳಿಯನ್ನು ಅಪ್ಪಳಿಸಿದೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಒಡಿಶಾದಲ್ಲಿ ಭಾರಿ ಮಳೆ ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಅಕ್ಟೋಬರ್ 26 ರಂದು ಬೆಳಿಗ್ಗೆ 8:30 ಕ್ಕೆ ವಾತಾವರಣ ವ್ಯವಸ್ಥೆಯು ಪೋರ್ಟ್ ಬ್ಲೇರ್‌ನ ಪಶ್ಚಿಮಕ್ಕೆ ಸುಮಾರು 620 ಕಿ.ಮೀ., ಚೆನ್ನೈನ ಪೂರ್ವ-ಆಗ್ನೇಯಕ್ಕೆ 780 ಕಿ.ಮೀ., ಮತ್ತು ವಿಶಾಖಪಟ್ಟಣಂನ ದಕ್ಷಿಣ-ಆಗ್ನೇಯಕ್ಕೆ 830 ಕಿ.ಮೀ. ದೂರದಲ್ಲಿತ್ತು. ಇದು ಗಂಟೆಗೆ 6 ಕಿ.ಮೀ. ವೇಗದಲ್ಲಿ ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಚಂಡಮಾರುತ ಚಲಿಸುತ್ತಿದೆ. ಈ ವ್ಯವಸ್ಥೆಯು ಸೋಮವಾರ (ಅಕ್ಟೋಬರ್ 27) ರ ವೇಳೆಗೆ ಚಂಡಮಾರುತವಾಗಿ ಮತ್ತು ಮಂಗಳವಾರ (ಅಕ್ಟೋಬರ್ 28) ರ ವೇಳೆಗೆ ತೀವ್ರ ಚಂಡಮಾರುತವಾಗಿ ಮತ್ತಷ್ಟು ಬಲಗೊಳ್ಳುವ ಸಾಧ್ಯತೆ ಇದೆ.
ಚಂಡಮಾರುತದ ಕೇಂದ್ರಬಿಂದುವಿನಿಂದ ಕರ್ನಾಟಕ ದೂರವಿದೆ. ಆಂಧ್ರಪ್ರದೇಶ ಹಾಗೂ ತೆಲಂಗಾಣದ ಗಡಿ ಭಾಗಗಳಿಗೆ ಹತ್ತಿರದಲ್ಲಿರುವ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಬುಧವಾರದವರೆಗೂ ಬೆಂಗಳೂರು ಸೇರಿದಂತೆ ಕರ್ನಾಟದಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಅಲ್ಲಲ್ಲಿ ಲಘು ಮಳೆಯಾಗಬಹುದು. ಹೈದ್ರಾಬಾದ್ ಕರ್ನಾಟದಲ್ಲಿ ಸ್ವಲ್ಪ ಹೆಚ್ಚಿನ ಮಳೆಯನ್ನು ನಿರೀಕ್ಷಿಸಲಾಗಿದೆ. ಉದಾಹರಣೆಗೆ ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್ ಹೀಗೆ ಗಡಿಯಲ್ಲಿರುವ ಹಲವಾರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ದಕ್ಷಿಣ ಒಡಿಶಾದ ಎಂಟು ಜಿಲ್ಲೆಗಳಲ್ಲಿ 128 ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಲಾಗಿದೆ. ಒಡಿಶಾದಲ್ಲಿ ‘ಮೊಂತಾ’ ಚಂಡಮಾರುತ ಅಪ್ಪಳಿಸಲಿರುವ ಹಿನ್ನೆಲೆಯಲ್ಲಿ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತಿದೆ. ಸಂಭವನೀಯ ಪ್ರಾಕೃತಿಕ ವಿಕೋಪವನ್ನು ಎದುರಿಸಲು ರಾಜ್ಯ ಸರ್ಕಾರವು ಸಿದ್ಧವಾಗಿದೆ ಎಂದು ವರದಿಯಾಗಿದೆ.
ಒಡಿಶಾದ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಸುರೇಶ್ ಪೂಜಾರಿ ಮಾಧ್ಯಮಗಳ ಜೊತೆ ಮಾತನಾಡಿದ್ದು, “ಇಂದು (ಸೋಮವಾರ) ಸಂಜೆಯೊಳಗೆ ಜನರನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು” ಎಂದಿದ್ದಾರೆ.
ಆಂಧ್ರಪ್ರದೇಶದ ಕರಾವಳಿ ಮೂಲಕ ಒಡಿಶಾದ ದಕ್ಷಿಣ ಹಾಗೂ ಕರಾವಳಿ ಪ್ರದೇಶಗಳ ಮೇಲೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ. ಮಾಲ್‌ಕಾನ್‌ಗಿರಿ, ಕೊರಾಪುಟ್, ನಬ್‌ರಂಗ್‌ಪುರ, ರಾಯಗಢ, ಗಜ್‌ಪತಿ, ಗಂಜಾಂ, ಕಂಧಮಾಲ್ ಮತ್ತು ಕಲಾಹಂಡಿ ಜಿಲ್ಲೆಗಳಲ್ಲಿ ‘ರೆಡ್ ಅಲರ್ಟ್’ ಘೋಷಿಸಲಾಗಿದೆ. ಗಂಟೆಗೆ 80 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.


