ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ‘ಫೆಂಗಲ್ ಚಂಡಮಾರುತ’ ಅಪ್ಪಳಿಸಲಿದೆ.
ಭಾರತದಲ್ಲಿ ಚಳಿಗಾಲದ ಮಧ್ಯೆ ಮತ್ತೆ ಚಂಡಮಾರುತ ಎದುರಾಗುವ ಭೀತಿ ಉಂಟಾಗಿದೆ. ದೇಶದ ನಾಲ್ಕು ರಾಜ್ಯಗಳಲ್ಲಿ ಫೆಂಗಲ್ ಚಂಡಮಾರುತ ಉಂಟಾಗುವ ಸಾಧ್ಯತೆ ಇದ್ದು ಈ ಹಿನ್ನೆಲೆ ಆ ರಾಜ್ಯಗಳಿಗೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕಳೆದ ಕೆಲವು ದಿನಗಳಿಂದ ಬಂಗಾಳಕೊಲ್ಲಿಯಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಉಂಟಾಗಿರುವ ಕಡಿಮೆ ಒತ್ತಡದ ಪ್ರದೇಶ ಇದೀಗ ಭಾರಿ ಚಂಡಮಾರುತದ ರೂಪ ಪಡೆದುಕೊಂಡಿದ್ದು, ತಮಿಳುನಾಡು ಸೇರಿ ಭಾರತದ ನೆರೆಯ ದೇಶ ಶ್ರೀಲಂಕಾದಲ್ಲಿ ಕೂಡ ಇದು ಭಾರೀ ಹಾನಿಯನ್ನುಂಟು ಮಾಡಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಚಂಡಮಾರುತದ ಗಂಭೀರತೆ ಪರಿಗಣಿಸಿ ಹವಾಮಾನ ಇಲಾಖೆ ತಮಿಳುನಾಡಿನ ಮೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಈ ಚಂಡಮಾರುತವು ನವೆಂಬರ್ 28 ರಂದು ಪೂರ್ಣ ಪ್ರಮಾಣದಲ್ಲಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಚಂಡಮಾರುತದಿಂದಾಗಿ ತಮಿಳುನಾಡಿನ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಚಂಡಮಾರುತದಿಂದಾಗಿ ಈ ರಾಜ್ಯಗಳಲ್ಲಿ ಭಾರೀ ಬಿರುಗಾಳಿ ಸಹಿತ ಮಳೆ ಉಂಟಾಗಲಿದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಪ್ರವಾಸಿಗರಿಗೆ ಕಡಲ ಕಿನಾರೆಗೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ.
ನವೆಂಬರ್ 27 ರಂದು ಚಂಡಮಾರುತದ ವೇಗ ತೀವ್ರಗೊಳ್ಳುತ್ತದೆ. ನಂತರ ಇದು ಉತ್ತರ-ವಾಯುವ್ಯದ ಕಡೆಗೆ ತಮಿಳುನಾಡು ಕರಾವಳಿಯ ಕಡೆಗೆ ಚಲಿಸುತ್ತದೆ. ನಂತರದ 2 ದಿನಗಳಲ್ಲಿ ಶ್ರೀಲಂಕಾ ಕರಾವಳಿಯಲ್ಲೂ ಮಳೆಯಾಗಲಿದೆ. ನವೆಂಬರ್ 26 ಮತ್ತು 27 ರಂದು ತಮಿಳುನಾಡು ಮತ್ತು ಪುದುಚೇರಿಯ ಹಲವು ಭಾಗಗಳಲ್ಲಿ ಹೆಚ್ಚಿನ ಮಳೆಯಾಗಲಿದೆ.
ಆಂಧ್ರಪ್ರದೇಶಕ್ಕೆ ಮಳೆಯ ಎಚ್ಚರಿಕೆಯನ್ನು ಸಹ ನೀಡಲಾಗಿದ್ದು, ನವೆಂಬರ್ 26 ರಿಂದ 29 ನಡುವೆ ಮಳೆಯಾಗಲಿದೆ. ನಾಗಪಟ್ಟಣಂ, ತಿರುವರೂರ್ ಮತ್ತು ಮೈಲಾಡುತುರೈ ಜಿಲ್ಲೆಗಳಿಗೆ ಮತ್ತು ಕಾರೈಕಲ್ ಪ್ರದೇಶಕ್ಕೆ ನ.26 ರಂದು ಐಎಂಡಿ ರೆಡ್ ಅಲರ್ಟ್ ಘೋಷಿಸಿದ್ದು, ಈ ನಾಲ್ಕು ಜಿಲ್ಲೆಗಳಲ್ಲಿ ಹಲವೆಡೆ ಅತಿ ಹೆಚ್ಚು ಮಳೆಯಾಗುವ ಸಂಭವ ಹೆಚ್ಚಿದೆ.
ಬೆಂಗಳೂರಿನ ಮೇಲೆ ಏನು ಪರಿಣಾಮ
‘ಫೆಂಗಲ್ ಚಂಡಮಾರುತ’ ಬೆಂಗಳೂರಿನ ಮೇಲೂ ಪರಿಣಾಮ ಬೀರಲಿದ್ದು, ಮುಂದಿನ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ.