ಸತ್ಯ, ಅಹಿಂಸೆ, ಸಹಿಷ್ಣುತೆಯನ್ನೇ ಉಸಿರಾಡಿದ ಮಹಾತ್ಮಾ ಗಾಂಧಿ ಅವರನ್ನು ಕೊಂದ ಸಂಸ್ಕೃತಿಯವರ ಮಾನಸಿಕ ಕ್ರೌರ್ಯ ಮುಂದುವರೆಯುತ್ತಲೇ ಇದೆ. ಗಾಂಧೀಯನ್ನು ಅವಮಾನಿಸುವ, ಹೀಯಾಳಿಸುವ ಹೀನ ಮನಸ್ಥಿಯನ್ನೇ ಇಂದು ಪತ್ರಿಕೆಗಳ ಮೂಲಕ ಜಾಹೀರಾತುಗಳಲ್ಲಿ ರಾಜ್ಯ ಬಿಜೆಪಿ ಪ್ರಕಟಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ ಕೆ ಹರಿಪ್ರಸಾದ್ ಟೀಕಿಸಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, “ಕ್ರೌರ್ಯ, ಕೊಲೆ, ಹಿಂಸೆ, ದೌರ್ಜನ್ಯ, ಗೂಂಡಾಗಿರಿಯನ್ನೇ ಬದುಕನ್ನಾಗಿಸಿಕೊಂಡಿರುವ ಸಂಘ ಪರಿವಾರ ಹಾಗೂ ಬಿಜೆಪಿ ಪಕ್ಷ ಗಾಂಧಿ ಅವರ ಊರುಗೋಲನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊಡೆಯಲು ಹೋಗುವಂತೆ ಚಿತ್ರಿಸುವ ಜಾಹೀರಾತು ನೀಡುವ ಮೂಲಕ ಗಾಂಧಿಯವರ ಅಹಿಂಸಾ ತತ್ವವನ್ನೇ ಅವಮಾನಿಸಿದೆ” ಎಂದು ಹರಿಹಾಯ್ದಿದ್ದಾರೆ.
“ಆರ್ ಎಸ್ ಎಸ್ ಬಳಸುವ ಲಾಠಿ ಹಿಂಸೆಯ ಸೂಚಕ, ಗಾಂಧಿ ಬಳಸಿದ ಊರುಗೋಲು ಕೇವಲ ಆಸರೆಯಲ್ಲ, ಬದಲಾಗಿ ಬಲ, ಪರಿಶ್ರಮ ಮತ್ತು ಛಲದ ಸಂಕೇತವಾಗಿತ್ತು. ಗಾಂಧಿಯವರ ತತ್ವಾದರ್ಶಗಳ ಮೇಲೆ ಬಿಜೆಪಿ ಮತ್ತು ಸಂಘಪರಿವಾರ ನಿರಂತರ ದಾಳಿ ಮಾಡುತ್ತಲೇ ಇದೆ. ದೇಶದ ರಾಷ್ಟ್ರಪಿತನ ಬಗ್ಗೆ ಅವಹೇಳನಕಾರಿ ಪ್ರಕಟಿಸಿರುವ ಬಹುತೇಕ ಮಾಧ್ಯಮಗಳು ಜಾಹೀರಾತನ್ನು ಪ್ರಕಟಿಸದೆ ಪತ್ರಿಕಾಧರ್ಮ ಪಾಲಿಸಬೇಕಿತ್ತು” ಎಂದಿದ್ದಾರೆ.
“ರಾಜ್ಯದ ಪತ್ರಿಕೆಗಳು ಕೂಡ “ಗೋದಿ ಮಾಧ್ಯಮದ” ಭಾಗವಾಗಬಾರದು. ಯಾಕಂದರೆ “ಬಾಪೂ” ಈ ದೇಶ ಕಂಡ ಅತ್ಯಂತ ಆದರ್ಶ ಪತ್ರಕರ್ತರೂ ಆಗಿದ್ದರು ಎಂಬ ಇತಿಹಾಸವನ್ನು ಮರೆಯಬಾರದು” ಎಂದು ಸಲಹೆ ನೀಡಿದ್ದಾರೆ.


