Homeಕರ್ನಾಟಕಕೆಎಸ್‌ಡಿಎಲ್ ಮೇಲೆ ಟೀಕೆ: ವಿಜಯೇಂದ್ರ ವಿರುದ್ಧ ಎಂ ಬಿ ಪಾಟೀಲ್ ಕಿಡಿ

ಕೆಎಸ್‌ಡಿಎಲ್ ಮೇಲೆ ಟೀಕೆ: ವಿಜಯೇಂದ್ರ ವಿರುದ್ಧ ಎಂ ಬಿ ಪಾಟೀಲ್ ಕಿಡಿ

ಕೆಎ‌ಸ್‌ಡಿಎಲ್ ಸಂಸ್ಥೆಯ ವಿಚಾರದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಕನ್ನಡ ಅಸ್ಮಿತೆಯ ಬಗ್ಗೆ ಮಾತನಾಡುತ್ತಿದ್ದಾರೆ. ಹಿಂದೆ ಬಿಜೆಪಿ ಸರಕಾರವಿದ್ದಾಗ ಸಂಸ್ಥೆಯ ಅಧ್ಯಕ್ಷರಾಗಿದ್ದ ಮಾಡಾಳ್ ವಿರೂಪಾಕ್ಷಪ್ಪ ಅವ್ಯವಹಾರ ನಡೆಸಿ ಜೈಲಿಗೆ ಹೋಗಿದ್ದರು. ಆಗ ತೆಪ್ಪಗಿದ್ದ ವಿಜಯೇಂದ್ರ ಅವರಿಗೂ ಮಾಡಾಳ್ ಗೂ ವ್ಯವಹಾರ ಇತ್ತೇನೋ. ಆಗ ಏಕೆ ಇವರಿಗೆ ಕನ್ನಡ ಅಸ್ಮಿತೆ ನೆನಪಾಗಲಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ್ ಸೋಮವಾರ ಕಿಡಿ ಕಾರಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಇಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಲ್ಲಿ ಕೆಎಸ್ಡಿಎಲ್ ಸಾರ್ವಕಾಲಿಕ ಉತ್ಪಾದನೆ, ವಹಿವಾಟು ಮತ್ತು ಲಾಭ ಮಾಡಿದೆ. ಇದನ್ನು ನಾನು ನನ್ನ ಸ್ವಂತ ವ್ಯಾಪಾರಕ್ಕಿಂತ ಹೆಚ್ಚು ಆದ್ಯತೆ ಕೊಟ್ಟು, ದಕ್ಷತೆ ಹೆಚ್ಚಿಸಿದ್ದೇನೆ. ಸಂಸ್ಥೆ ಸೊರಗಿದ್ದಾಗ ಏನೂ ಮಾತನಾಡದವರ ಕೆಂಗಣ್ಣು ಈಗ ಅದರ ಮೇಲಿದೆ ಎಂದಿದ್ದಾರೆ.

ಹಿಂದಿ ನಟಿ ತಮನ್ನಾ ಭಾಟಿಯಾ ಅವರನ್ನು ಪ್ರಚಾರ ರಾಯಭಾರಿಯಾಗಿ ಮಾಡಿಕೊಂಡಿರುವುದರ ಹಿಂದೆ ವಾಣಿಜ್ಯಿಕ ಉದ್ದೇಶವಿದೆ. ನಾನು ಇದನ್ನು ಸ್ಪಷ್ಟಪಡಿಸಿದ ಮೇಲೆ ಕೆಲವು ಕನ್ನಡಪರ ಸಂಘಟನೆಗಳ ನಾಯಕರು, ಈ ವಿಚಾರ ತಮಗೆ ಗೊತ್ತಿರಲಿಲ್ಲ; ನೀವು ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ನನಗೆ ಹೇಳಿದ್ದಾರೆ. ನಾನು ಯಾರಿಂದಲೂ ಕನ್ನಡಾಭಿಮಾನವನ್ನು ಕಲಿಯುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ 23 ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ. ಸದ್ಯದಲ್ಲೇ ಡಿಶ್ ವಾಶರ್ ಮತ್ತು ಸುಗಂಧ ದ್ರವ್ಯಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ನಾವು ವ್ಯಾಪಾರವನ್ನು ವ್ಯಾಪಾರವಾಗಿಯೇ ನೋಡಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಹೈದರಾಬಾದಿನಲ್ಲಿ ನಕಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಸುತ್ತಿದ್ದರು. ಅದನ್ನು ನಾವು ಮಟ್ಟ ಹಾಕಿದೆವು. ಈಗಲೂ ಕೆಲವರು ಇದನ್ನು ನಕಲು ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ವಿವರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments