Homeಕರ್ನಾಟಕರಾಜಕೀಯ ಅಸ್ತಿತ್ವಕ್ಕಾಗಿ ಬಿಜೆಪಿ-ಜೆಡಿಎಸ್‌ ಮೈತ್ರಿಯಲ್ಲಿ ಬಿರುಕು: ‌ಡಿಸಿಎಂ ಡಿ ಕೆ ಶಿವಕುಮಾರ್

ರಾಜಕೀಯ ಅಸ್ತಿತ್ವಕ್ಕಾಗಿ ಬಿಜೆಪಿ-ಜೆಡಿಎಸ್‌ ಮೈತ್ರಿಯಲ್ಲಿ ಬಿರುಕು: ‌ಡಿಸಿಎಂ ಡಿ ಕೆ ಶಿವಕುಮಾರ್

ಮುಡಾ ಅಕ್ರಮ ಖಂಡಿಸಿ ಬಿಜೆಪಿ ಪಾದಯಾತ್ರೆ ಸಂಬಂಧ ಬಿಜೆಪಿ-ಜೆಡಿಎಸ್‌ ಮೈತ್ರಿಯಲ್ಲಿ ಅಪಸ್ವರ ಮೂಡಿರುವ ಬಗ್ಗೆ ಡಿಸಿಎಂ ಡಿ ಕೆ ಶಿವಕುಮಾರ್‌ ಅಚ್ಚರಿ ಹೇಳಿಕೆ ನೀಡಿದ್ದಾರೆ.

ವಿಧಾನಸೌಧದ ಆವರಣದಲ್ಲಿ ಸುದ್ದಿಗಾರರು ಗುರುವಾರ ಬಿಜೆಪಿ ಪಾದಯಾತ್ರೆ ಬಗ್ಗೆ ಗಮನ ಸೆಳೆದಾಗ ಪ್ರತಿಕ್ರಿಯಿಸಿ, “ಜೆಡಿಎಸ್ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಅವರ ಅಸ್ತಿತ್ವವನ್ನು ಕಿತ್ತುಕೊಳ್ಳಲು ಬಿಜೆಪಿಗೆ ಹೇಗೆ ಸಾಧ್ಯ” ಎಂದು ಪ್ರಶ್ನಿಸಿದರು.

ಬಿಜೆಪಿ ಪಾದಯಾತ್ರೆ ಸಂಬಂಧ ಮೈತ್ರಿಯಲ್ಲಿ ಅಪಸ್ವರ ಮೂಡಿರುವ ಬಗ್ಗೆ ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳು ಗುರುವಾರ ಗಮನ ಸೆಳೆದಾಗ ಶಿವಕುಮಾರ್ ಅವರು ಹೀಗೆ ಪ್ರತಿಕ್ರಿಯಿಸಿದರು.

“ಕುಮಾರಸ್ವಾಮಿ ಆಗಲಿ, ನಾನಾಗಲಿ, ಬಿಜೆಪಿಯವರಾಗಲಿ ಎಲ್ಲರೂ ಅವರವರ ಪಕ್ಷದ ರಾಜಕಾರಣ ಮಾಡುತ್ತಾರೆ. ಕುಮಾರಸ್ವಾಮಿ ಅವರು ತಮ್ಮ ಪಕ್ಷದ ಹಾಗೂ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸಿದ್ದೇನೆ. ಈ ವಿಚಾರಕ್ಕಾಗಿ ಮೈತ್ರಿಯಲ್ಲಿ ತಿಕ್ಕಾಟ ನಡೆಯುತ್ತಿರಬಹುದು” ಎಂದು ತಿಳಿಸಿದರು.

“ಬಿಜೆಪಿಯವರು ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲದೊಂದಿಗೆ ಸುಮಾರು 10 ಕ್ಷೇತ್ರಗಳನ್ನು ಗೆದ್ದಿದ್ದಾರೆ. ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ ಜೆಡಿಎಸ್ ನೆಲೆ ಇರುವ ಪ್ರದೇಶ. ಇಲ್ಲಿ ಬಿಜೆಪಿಯವರು ಜೆಡಿಎಸ್ ನವರನ್ನು ಪರಿಗಣಿಸದೇ ತಮಟೆ ಬಾರಿಸಿಕೊಂಡು ನಾಯಕತ್ವ ಅಪಹರಿಸಲು ಹೋದರೆ ಅದನ್ನು ಸಹಿಸಿಕೊಳ್ಳಲು ಜೆಡಿಎಸ್‌ಗೆ ಸಾಧ್ಯವೇ” ಎಂದು ಕೇಳಿದರು.

ಪಾದಯಾತ್ರೆಗೆ ತಿರುಗೇಟು ನೀಡಲು ಸಿದ್ಧತೆ

ಪೆನ್ ಡ್ರೈವ್ ವಿಚಾರವಾಗಿ ನಿಮ್ಮ ಮೇಲೆ ಆರೋಪ ಮಾಡಿದ್ದ ಕುಮಾರಸ್ವಾಮಿ ಅವರು ಈಗ ಪ್ರೀತಂಗೌಡ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ, “ಈಗ ಆ ವಿಚಾರ ಬೇಡ, ಆಮೇಲೆ ಮಾತನಾಡೋಣ. ಈಗ ಪಾದಯಾತ್ರೆ ಬಗ್ಗೆ ಚರ್ಚೆ ಮಾಡೋಣ. ನಾವು ಅವರ ಪಾದಯಾತ್ರೆಗೆ ತಿರುಗೇಟು ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಬಿಜೆಪಿ ಸರಕಾರದ ಕಾಲದ 30 ಹಗರಣಗಳಿವೆ. ದಿನಾ ಒಂದೊಂದು ಹಗರಣ ಬಿಚ್ಚಿಡುತ್ತೇವೆ. ಅವರ ಪಾದಯಾತ್ರೆ ಅಂತಿಮ ರೂಪುರೇಷೆ ಬಂದರೆ ನಾವು ನಮ್ಮ ಕಾರ್ಯಸೂಚಿ ತೀರ್ಮಾನ ಮಾಡುತ್ತೇವೆ” ಎಂದು ತಿಳಿಸಿದರು.

ಕೇಂದ್ರ ಸರ್ಕಾರ ರಾಜಭವನದ ಮೂಲಕ ರಾಜ್ಯ ಸರ್ಕಾರ ಕೆಡವಲು ಪ್ರಯತ್ನಿಸುತ್ತಿದೆ ಎಂಬ ಆರೋಪದ ಬಗ್ಗೆ ಕೇಳಿದಾಗ, “ಸಚಿವ ಸಂಪುಟ ಸಭೆ ಬಳಿಕ ನಾನು ಬಂದು ವಿವರಣೆ ನೀಡುತ್ತೇನೆ. ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯಿದೆ” ಎಂದು ತಿಳಿಸಿದರು.

ಬೆಂಗಳೂರು ಅಭಿವೃದ್ಧಿ ಬಗ್ಗೆ ಪ್ರಧಾನಮಂತ್ರಿಗಳ ಜತೆ ಚರ್ಚೆ

ಪ್ರಧಾನ ಮಂತ್ರಿಗಳ ಭೇಟಿ ವಿಚಾರವಾಗಿ ಕೇಳಿದಾಗ, “ಬೆಂಗಳೂರು ಬಹಳ ಪ್ರಮುಖವಾದ ನಗರ. ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಆದಾಯ ನೀಡುತ್ತಿರುವ ನಗರ. ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ, ವಿಮಾನ ನಿಲ್ದಾಣ ಮೇಲ್ಸೇತುವೆ, ನೆಲಮಂಗಲ ಮೇಲ್ಸೆತುವೆ ಯೋಜನೆಗಳನ್ನು ನೀಡಲಾಗಿತ್ತು. ಈಗ ಜನಸಂಖ್ಯೆ ಹೆಚ್ಚಾಗಿರುವ ಕಾರಣ ವರ್ತುಲ ರಸ್ತೆಗೆ ಮಿಲಿಟರಿ ಭೂಮಿ ಬೇಕಾಗಿದೆ. ಅದನ್ನು ದೊರಕಿಸಿಕೊಡುವಂತೆ ಮನವಿ ಮಾಡಿದ್ದೇವೆ” ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments