ಸಿ ಪಿ ಯೋಗೇಶ್ವರ್ ಅವರು ಪರಿಷತ್ ಸದಸ್ಯತ್ವಕ್ಕೆ ಸೋಮವಾರ ರಾಜೀನಾಮೆ ನೀಡಿದ್ದು ಹಾಗೂ ಅದು ಅಂಗೀಕಾರವಾಗಿರುವ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದಿದ್ದೇನೆ. ಅವರು ಪಕ್ಷೇತರರಾಗಿ ಸ್ಪರ್ಧೆ ಮಾಡುವುದಾಗಿ ಚನ್ನಪಟ್ಟಣದಲ್ಲಿ ಸಭೆ ಮಾಡುತ್ತಿದ್ದಾರೆ. ಇದರ ಹೊರತಾಗಿ ಅವರು ಕಾಂಗ್ರೆಸ್ ಸೇರುವ ಕುರಿತು ಯಾವುದೇ ವಿಚಾರ ಗೊತ್ತಿಲ್ಲ ಎಂದು ಮಾಜಿ ಸಂಸದ ಡಿ ಕೆ ಸುರೇಶ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಮಂಗಳವಾರ ಪ್ರತಿಕ್ರಿಯಿಸಿದರು. ಕಾರ್ಯಕರ್ತರು ನಿಮ್ಮ ಸ್ಪರ್ಧೆಗೆ ಹೆಚ್ಚಿನ ಒತ್ತಡ ಹಾಕುತ್ತಿದ್ದಾರೆ, ಚನ್ನಪಟ್ಟಣದಲ್ಲಿ ಗೆಲ್ಲುವ ವಿಶ್ವಾಸವಿದೆಯೇ ಎಂದು ಕೇಳಿದ ಪ್ರಶ್ನೆಗೆ, “ನನ್ನ ಮುಕ್ತವಾದ ಅಭಿಪ್ರಾಯಗಳನ್ನು ಪಕ್ಷದ ವರಿಷ್ಠರಿಗೆ ತಿಳಿಸುತ್ತೇನೆ. ಅವರು ತೀರ್ಮಾನ ಮಾಡಿದ ನಂತರ ನಾನು ತೀರ್ಮಾನ ಮಾಡುತ್ತೇನೆ. ಪಕ್ಷದ ಆದೇಶವನ್ನು ನಾನು ಪಾಲಿಸಬೇಕು, ನಮ್ಮ ಮುಖಂಡರೂ ಪಾಲಿಸಬೇಕು” ಎಂದರು.
ಸೋಮವಾರ ರಾತ್ರಿ ರಾಮನಗರ ಜಿಲ್ಲಾ ಮುಖಂಡರ ಸಭೆಯಲ್ಲಿ ಏನೆಲ್ಲಾ ಚರ್ಚೆಯಾಗಿದೆ ಎಂದು ಕೇಳಿದಾಗ, “ನಮ್ಮ ಪಕ್ಷದ ಮುಂದಿನ ನಡೆ ಹೇಗಿರಬೇಕು ಎಂದು ಜಿಲ್ಲೆ ಶಾಸಕರು ಹಾಗೂ ಮುಖಂಡರ ಜತೆ ನಾವು ಚರ್ಚೆ ಮಾಡಿದ್ದು, ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷ ಗಟ್ಟಿಯಾಗಿದ್ದು, ಪಕ್ಷದಿಂದಲೇ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದ್ದಾರೆ” ಎಂದು ಮಾಹಿತಿ ನೀಡಿದರು.
ಯೋಗೇಶ್ವರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸುರೇಶ್ ಅವರು ಸ್ವಾಗತಿಸುತ್ತಾರಾ ಎಂಬ ಪ್ರಶ್ನೆಗೆ, “ಚನ್ನಪಟ್ಟಣದಲ್ಲಿ ಕಳೆದ ಮೂರು ತಿಂಗಳಿನಿಂದ ಜೆಡಿಎಸ್ ಹಾಗೂ ಬಿಜೆಪಿಯಿಂದ ಬರುವ ಎಲ್ಲಾ ಮುಖಂಡರನ್ನು ನಾವು ಸ್ವಾಗತಿಸಿದ್ದೇವೆ. ಪಕ್ಷದ ತತ್ವ ಸಿದ್ಧಾಂತ, ನಾಯಕತ್ವ ಒಪ್ಪಿ ಬರುವವರಿಗೆ ಸ್ವಾಗತವಿದೆ. ಯೋಗೇಶ್ವರ್ ಅಥವಾ ಮತ್ತೊಬ್ಬರು ಎಂದು ಪ್ರತ್ಯೇಕಿಸಿ ಹೇಳುವುದಿಲ್ಲ. ಯೋಗೇಶ್ವರ್ ಅವರ ಪಕ್ಷ ಸೇರ್ಪಡೆ ವಿಚಾರ ನನ್ನ ಮುಂದೆ ಇಲ್ಲ. ಅವರು ಹಿರಿಯ ನಾಯಕರು ಮಾಜಿ ಸಚಿವರು, ಸಾಕಷ್ಟು ಅನುಭವ ಇರುವವರು. ಅವರ ಎನ್‌ಡಿಎ ಮೈತ್ರಿ ಗಟ್ಟಿಯಾಗಿದ್ದು, ಅವರು ಯಾವ ತೀರ್ಮಾನ ಮಾಡುತ್ತಾರೆ ಕಾದು ನೋಡೋಣ” ಎಂದು ತಿಳಿಸಿದರು.
ಗುರುವಾರ ಯೋಗೇಶ್ವರ್ ಅವರು ಸೇರ್ಪಡೆಯಾಗಲಿದ್ದಾರೆ ಎಂದು ಚರ್ಚೆಯಾಗುತ್ತಿರುವ ಬಗ್ಗೆ ಕೇಳಿದಾಗ, “ಚನ್ನಪಟ್ಟಣದ ಕಾರ್ಯಕರ್ತರು ನನಗೆ ಕರೆ ಮಾಡಿ ಯೋಗೇಶ್ವರ್ ಅವರು ಪಕ್ಷೇತರವಾಗಿ ಸ್ಪರ್ಧೆ ಮಾಡಲು ಸಭೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಈ ಸಭೆಯ ವಾಸ್ತವಾಂಶ ಏನು ಎಂದು ಸಂಜೆಯ ಒಳಗಾಗಿ ತಿಳಿಯಲಿದೆ” ಎಂದು ತಿಳಿಸಿದರು.