ಚನ್ನಪಟ್ಟಣ ಉಪ ಚುನಾವಣೆ ಕದನ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆಯುತ್ತಿದೆ. ಗುರುವಾರ ನಾಮಪತ್ರ ಸಲ್ಲಿಸುತ್ತೇನೆ ಎಂದು ಬಹಿರಂಗವಾಗಿ ಹೇಳಿದ್ದ ಬಿಜೆಪಿ ನಾಯಕ ಸಿ ಪಿ ಯೋಗೇಶ್ವರ್ ಬುಧವಾರ ಬೆಳಿಗ್ಗೆ ಹೊತ್ತಿಗೆ ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಂಡಿದ್ದಾರೆ.
ಚನ್ನಪಟ್ಟಣ ಅಭ್ಯರ್ಥಿಯಾಗಲೆಂದೇ ಬಿಜೆಪಿಯ ವಿಧಾನ ಪರಿಷತ್ ಸ್ಥಾನಕ್ಕೆ ಯೋಗೇಶ್ವರ್ ರಾಜೀನಾಮೆ ನೀಡಿದ್ದರು. ಮಂಗಳವಾರ ಇಡೀ ದಿನ ಬಿಜೆಪಿ ತಮಗೆ ಟಿಕೆಟ್ ನೀಡಬಹುದು ಎಂದು ಕಾದು ಕೊನೆಗೆ ಕಾಂಗ್ರೆಸ್‌ನತ್ತ ಮುಖಮಾಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ಬುಧವಾರ ರಾಜೀನಾಮೆ ಪತ್ರ ಬರೆದು, “ಬಿಜೆಪಿ ಪಕ್ಷದ ಎಲ್ಲ ಸ್ಥಾನಗಳಿಗೂ ರಾಜೀನಾಮೆ ನೀಡಿದ್ದೇನೆ. ಇಷ್ಟು ದಿನ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು” ಎರಡು ಸಾಲಿನಲ್ಲಿ ಪತ್ರ ಮುಗಿಸಿದ್ದಾರೆ.
ಮಂಗಳವಾರ ಜೆಡಿಎಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರು ಚನ್ನಪಟ್ಟಣದ ಕಾರ್ಯಕರ್ತರ ಜೊತೆ ಸಭೆ ನಡೆಸಿ, ಸಿ ಪಿ ಯೋಗೇಶ್ವರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದರು. ‘ನೆಲದವರೆಗೂ ಬಗ್ಗಿದ್ದೇನೆ. ಇನ್ನು ಬಗ್ಗಲು ಆಗಲ್ಲ” ಎಂದು ಕುಮಾರಸ್ವಾಮಿ ಎಚ್ಚರಿಸಿದ್ದರು.
ಕುಮಾರಸ್ವಾಮಿ ಬಾಯಲ್ಲಿ ಯಾವಾಗ ಈ ಮಾತು ಬಂತೋ ಟಿಕೆಟ್ ತಮಗೆ ಕೈ ತಪ್ಪಿದೆ ಎಂದು ಅರಿತು ನಿರೀಕ್ಷೆಯಂತೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮನೆಯಲ್ಲಿ ಇಂದು ಬೆಳಿಗ್ಗೆ ಯೋಗೇಶ್ವರ್ ಕಾಣಿಸಿಕೊಂಡರು. ನಂತರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕಥೆ ನಡೆಸಿದರು. ಇವತ್ತೇ ಕಾಂಗ್ರೆಸ್ ಪಕ್ಷ ಸೇರಿ, ಚನ್ನಪಟ್ಟಣಕ್ಕೆ ಕಾಂಗ್ರೆಸ್‌ನಿಂದ ಯೋಗೇಶ್ವರ್ ಸ್ಪರ್ಧಿಸಲಿದ್ದಾರೆ.
ಅತ್ತ ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅಥವಾ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯುವ ಸಾಧ್ಯತೆ ಇದೆ.