ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ನಡೆದ ಹಸುವಿನ ಕೆಚ್ಚಲು ಕೊಯ್ದ ಅಹಿತಕರ ಘಟನೆ ಹಿನ್ನೆಲೆಯಲ್ಲಿ ಹಸುವಿನ ಮಾಲೀಕ ಕರ್ಣ ಅವರ ತಾಯಿ ಸವರಿ ಅಮ್ಮಳ್, ಸಹೋದರಿ ಅಮುದಾ ಅವರಿಗೆ ಸಚಿವ ಜಮೀರ್ ಅಹಮದ್ ಖಾನ್ ಅವರು ಮೂರು ಲಕ್ಷ ರೂ. ವೆಚ್ಚದಲ್ಲಿ ಮೂರು ಹಸು ಖರೀದಿಸಿ ನೀಡಿದರು.
ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಕೆಎಂಡಿಸಿ ಅಧ್ಯಕ್ಷ ಅಲ್ತಾಫ್ ಖಾನ್, ಮುಖಂಡರಾದ ಅತುಶ್, ಗೌಸಿ, ವಿನಾಯಕ್, ಪ್ರಸಾದ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅಮುದಾ, “ಹಸು ನಿರಾಕರಿಸಿದ ನನ್ನ ಸಹೋದರನ ಪರವಾಗಿ ನಾನು ಕ್ಷಮೆ ಕೋರುತ್ತೇನೆ. ಜಮೀರಣ್ಣ ಅವರು ಒಳ್ಳೆ ಮನಸ್ಸಿನಿಂದ ಹಸು ಕೊಡಿಸಿದ್ದಾರೆ. ಕೆಲವರು ಇದರಲ್ಲಿ ರಾಜಕಾರಣ ಮಾಡುತ್ತಿದ್ದು, ನಾವು ಶಾಸಕರ ಜತೆ ಇದ್ದೇವೆ” ಎಂದು ಹೇಳಿದರು.
ಗೋವುಗಳ ಕೆಚ್ಚಲು ಕತ್ತರಿಸುವ ಮೂಲಕ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾದ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ ಅವರು ಖಂಡಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್ ಅಶೋಕ್ ಸ್ಥಳಕ್ಕೆ ಮಕರ ಸಂಕ್ರಾಂತಿ ದಿನ ಭೇಟಿ ನೀಡಿ ರಾಜಕಾರಣಕ್ಕೆ ಬಳಸಿಕೊಂಡು ಸರ್ಕಾರದ ವಿರುದ್ಧ ಟೀಕೆ ಮಾಡಿದ್ದರು.