ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ. ವರದಿಯಲ್ಲಿ ಕೊರೊನಾದಿಂದ ಗುಣಮುಖರಾದವರಿಗೆ ಹೃದಯಾಘಾತವಾಗಿದೆ ಅಂತ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ತಜ್ಞರ ಜತೆ ಸಭೆ ನಡೆಸಿ, ವರದಿ ಸ್ವೀಕರಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, “ಕೊರೊನಾ ರೋಗದಿಂದ ಸ್ವಲ್ಪ ಮಟ್ಟಿಗೆ ಹೃದಯಾಘಾತ ಹೆಚ್ಚಾಗಿದೆ. ಕೊರೊನಾ ಬಂದ ಒಂದು ವರ್ಷದೊಳಗೆ ರಕ್ತನಾಳ ಬ್ಲಾಕೇಜ್ ಆಗುವ ಸಾಧ್ಯತೆ ಇದೆ. ಆದರೆ, ಮೂರು ವರ್ಷದ ನಂತರ ಅದರ ಪರಿಣಾಮ ಅಷ್ಟರ ಮಟ್ಟಿಗೆ ಇಲ್ಲ” ಎಂದು ತಿಳಿಸಿದರು.
“ಹೃದಯಾಘಾತಕ್ಕೆ ಲಸಿಕೆ ಕಾರಣವಲ್ಲ. ಕೊರೊನಾ ಲಸಿಕೆಯಿಂದ ಜನರಿಗೆ ಅನುಕೂಲ ಆಗಿದೆ. ಆದರೆ, ಎಂಆರ್ಎನ್ಎ ವ್ಯಾಕ್ಸಿನ್ ಬಗ್ಗೆ ಸ್ವಲ್ಪ ಅನುಮಾನ ಇದೆ. ಈ ವ್ಯಾಕ್ಸಿನ್ ಅನ್ನು ನಮ್ಮ ದೇಶದಲ್ಲಿ ಯಾರು ತೆಗೆದುಕೊಂಡಿಲ್ಲ” ಎಂದರು.
“ಹೃದಯಘಾತವನ್ನು ಸಡನ್ ಡೆತ್ ಅಧಿಸೂಚಿತ ಕಾಯಿಲೆ ಎಂದು ಘೋಷಣೆ ಮಾಡುತ್ತೇವೆ. ಹೃದಯಾಘಾತದಿಂದ ಮೃತಪಟ್ಟವರ ಮರಣೋತ್ತರ ಪರೀಕ್ಷೆ ಮಾಡುವುದು ಕಡ್ಡಾಯ. ಹೃದಯಾಘಾತದ ಬಗ್ಗೆ ಪ್ರತ್ಯೇಕ ಪಠ್ಯ ಅಳವಡಿಕೆ ಮಾಡಲಾಗುವುದು. ಶಿಕ್ಷಣ ಇಲಾಖೆ ಮುಂದಿನ ವರ್ಷದಿಂದ ಪಠ್ಯ ಅಳವಡಿಕೆ ಮಾಡುತ್ತೆ” ಎಂದು ಹೇಳಿದರು.