Homeಕರ್ನಾಟಕಕೋವಿಡ್‌ ಅಕ್ರಮ | ವರದಿ ಅಧ್ಯಯನಕ್ಕೆ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚನೆ

ಕೋವಿಡ್‌ ಅಕ್ರಮ | ವರದಿ ಅಧ್ಯಯನಕ್ಕೆ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚನೆ

ಬಿಜೆಪಿ ಸರಕಾರದ ಅವಧಿಯ ಕೋವಿಡ್‌-19 ಸಂದರ್ಭದಲ್ಲಿ ನಡೆದ ಔಷಧ, ವೈದ್ಯಕೀಯ ಸಾಮಗ್ರಿ ಖರೀದಿ ಒಳಗೊಂಡು ಸಾಂಕ್ರಾಮಿಕ ನಿರ್ವಹಣೆಯಲ್ಲಿ ಸಾವಿರಾರು ಕೋಟಿ ರೂ. ಅಕ್ರಮ ಆರೋಪ ಕುರಿತಂತೆ ನ್ಯಾ. ಕುನ್ಹಾ ನೇತೃತ್ವದ ತನಿಖಾ ಆಯೋಗದ ವರದಿಯನ್ನು ಅಧ್ಯಯನ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿರ್ಧರಿಸಲು ಅಧಿಕಾರಿಗಳ ಸಮಿತಿ ರಚನೆಗೆ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌ಕೆ ಅತೀಕ್‌ ಒಳಗೊಂಡು ಮೂರ್ನಾಲ್ಕು ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲು ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಂಪುಟ ತೀರ್ಮಾನಿಸಿದೆ.

ಔಷಧ, ವೈದ್ಯಕೀಯ ಸಲಕರಣೆಗಳ ಖರೀದಿ, ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸಾ ವೆಚ್ಚ ಮರುಪಾವತಿ ಒಳಗೊಂಡು ಕೋವಿಡ್‌ ನಿರ್ವಹಣೆಯಲ್ಲಿ ಸಾವಿರಾರು ಕೋಟಿ ಅಕ್ರಮ, ಅವ್ಯವಹಾರ ನಡೆದಿರುವ ಬಗ್ಗೆ ನ್ಯಾ. ಕುನ್ಹಾ ಆಯೋಗ ಆರು ಸಂಪುಟಗಳಲ್ಲಿ 1,772 ಪುಟಗಳ ಮೊದಲ ಕಂತಿನ ವರದಿ ನೀಡಿದೆ.

“ಕುನ್ಹಾ ವರದಿಯನ್ನು ವಿಶ್ಲೇಷಣಾತ್ಮಕವಾಗಿ ಅಧ್ಯಯನ ಮಾಡಿ ಅಧಿಕಾರಿಗಳ ಸಮಿತಿ ಸಲ್ಲಿಸುವ ವರದಿ ಆಧರಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ನಿರ್ಧರಿಸಲು ಸಂಪುಟ ಚರ್ಚಿಸಿತು” ಎಂದು ಕಾನೂನು ಸಚಿವ ಎಚ್‌ ಕೆ ಪಾಟೀಲ್‌ ತಿಳಿಸಿದ್ದಾರೆ.

”ಕೋವಿಡ್‌ ನಿರ್ವಹಣೆ ನೆಪದಲ್ಲಿ ಕೋಟ್ಯಂತರ ರೂಪಾಯಿ ಹಣ ದುರ್ಬಳಕೆ ಆಗಿರುವ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಖರೀದಿ ಒಳಗೊಂಡು ಈ ಸಂಬಂಧದ ಹಲವು ಮಹತ್ವದ ಕಡತಗಳು ನಾಪತ್ತೆಯಾಗಿರುವ ಬಗ್ಗೆಯೂ ನ್ಯಾ. ಕುನ್ಹಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮೇಲಾಗಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿಯಲ್ಲಿ ಉಲ್ಲೇಖಿಸಿದ್ದ ಹಲವು ಲೋಪಗಳನ್ನೂ ತನಿಖಾ ವರದಿ ಗುರುತಿಸಿದೆ” ಎಂದರು.

”ಕೋವಿಡ್‌ ಕಾಲದ ಬಹುಕೋಟಿ ಅಕ್ರಮ ಕುರಿತಂತೆ ನ್ಯಾ. ಕುನ್ಹಾ ತನಿಖಾ ವರದಿಯನ್ನು ಮಂಡನೆ ಮಾಡಿ ಚರ್ಚೆಗೆ ಅವಕಾಶ ಕಲ್ಪಿಸಲು ಅಗತ್ಯವಾದರೆ ವಿಧಾನ ಮಂಡಲ ವಿಶೇಷ ಅಧಿವೇಶನ ಕರೆಯುವ ಪ್ರಸ್ತಾಪವೂ ಸರಕಾರದ ಮುಂದಿದೆ” ಎಂದು ಎಚ್‌ ಕೆ ಪಾಟೀಲ್‌ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments