ಕೊರೋನಾ ಒಮಿಕ್ರಾನ್ ರೂಪಾಂತರಿ ತಳಿ JN.1 ಭೀತಿ ಶುರುವಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಲಹೆ ಮೇರೆಗೆ ಶಾಲಾ ಮಕ್ಕಳಿಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸುತ್ತೇವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, “ಕೋವಿಡ್ ಕುರಿತು ಸಿಎಂ ಸಿದ್ದರಾಮಯ್ಯ ಜೊತೆ ಕೂಡ ಈ ಬಗ್ಗೆ ಚರ್ಚೆಯಾಗಿದೆ. ಹೀಗಾಗಿ ಮಾಸ್ಕ್ ಟೆಸ್ಟಿಂಗ್ ಎಲ್ಲದರ ಬಗ್ಗೆ ನಿರ್ಧಾರ ಮಾಡುತ್ತಿದ್ದಾರೆ. ನಾವು ಆರೋಗ್ಯ ಇಲಾಖೆಯ ಮಾರ್ಗಸೂಚಿ ಪರಿಗಣಿಸುತ್ತೇವೆ. ಏನೆಲ್ಲಾ ಕ್ರಮ ವಹಿಸಬೇಕು ಅಂತಾ ನಿರ್ಧಾರ ಮಾಡುತ್ತಿದ್ದೇವೆ” ಎಂದರು.
ಶಾಲಾ ಪಠ್ಯ ಪರಿಸ್ಕರಣೆ ವಿಚಾರವಾಗಿ ಮಾತನಾಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, “ಶಾಲಾ ಬ್ಯಾಗ್ ಹೊರೆಯಾಗುತ್ತಿದೆ. ಇದನ್ನು ಪರಿಗಣಿಸಿ ಶಾಲಾ ಹೊರೆ ಕಡಿಮೆ ಮಾಡುತ್ತೇವೆ. ಮುಂದಿನ ವರ್ಷದಿಂದ ಶಾಲಾ ಹೊರೆ ಮತಷ್ಟು ಕಡಿಮೆ ಮಾಡಲಾಗುತ್ತದೆ” ಎಂದು ಹೇಳಿದರು.
ಟಿಪ್ಪು ಪಠ್ಯ ಕಡಿತ ವಿಚಾರವಾಗಿ ಪ್ರತಿಕ್ರಿಯಿಸಿ, “ತಜ್ಞರು ಏನು ಕೊಡುತ್ತಾರೆ ನಾವು ಅದನ್ನೇ ನೀಡುತ್ತೇವೆ. ಪಠ್ಯ ತಿರುಚಿವ ಪ್ರಯತ್ನ ಮಾಡುವುದಿಲ್ಲ. ಬಿಬಿಎಂಪಿ ಶಾಲೆಗಳನ್ನು ಶಿಕ್ಷಣ ವ್ಯಾಪ್ತಿಗೆ ಪಡೆಯುವುದು ನಾಳೆ ಡಿಸಿಎಂ ಜೊತೆ ಈ ವಿಚಾರ ಸಭೆ ಇದೆ. ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ” ಎಂದು ತಿಳಿಸಿದರು.
ಮಕ್ಕಳು ಮಾಸ್ಕ್ ಹಾಕಿಕೊಂಡರೆ ಒಳ್ಳೆಯದು: ಸಿದ್ದರಾಮಯ್ಯ
ಶಾಲಾ ಮಕ್ಕಳಿಗೆ ಮಾಸ್ಕ್ ಕಡ್ಡಾಯಗೊಳಿಸುವ ವಿಚಾರವಾಗಿ ಗೃಹಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಕ್ಯಾಬಿನೆಟ್ ಸಬ್ ಕಮಿಟಿ ರಚಿಸಿ ಅಲ್ಲಿ ತೀರ್ಮಾನ ಮಾಡಲಾಗುತ್ತೆ. ಮಕ್ಕಳು ಮಾಸ್ಕ್ ಹಾಕಿಕೊಂಡರೆ ಒಳ್ಳೆಯದು” ಎಂದರು.