JN.1 ತಳಿ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಯಾವುದೇ ಮಾರ್ಗಸೂಚಿ ಪ್ರಕಟವಾಗಿಲ್ಲ. ಹೊಸ ವರ್ಷಾಚರಣೆಗೆ ನಿರ್ಭಂದ ಹೇರುವು ಬಗ್ಗೆ ಈವರೆಗೂ ಚಿಂತನೆಗಳಲ್ಲ. ಇಂದಿನ ಸಭೆಯಲ್ಲಿ ಸಮಿತಿಯ ತಜ್ಞರೊಂದಿಗೂ ಚರ್ಚಿಸಿ ಮುಂದಿನ ಕ್ರಮಗಳ ಬಗ್ಗೆ ತೀರ್ಮಾನಿಸ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಮಂಗಳವಾರ ಸುದ್ದಿಗಾರರ ಜೊತೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, “ಜನ ಸೇರಬಾರದು, ಕಾರ್ಯಕ್ರಮ ಮಾಡಬಾರದು ಎಂದು ನಿಯಮ ಜಾರಿ ಮಾಡುತ್ತಿಲ್ಲ. ಆ ಮಟ್ಟಕ್ಕೆ ಭಯ ಆಗುವ ಅಗತ್ಯವಿಲ್ಲ. ಪಾಸಿಟಿವ್ ಬಂದವರು ಐಸೊಲೇಷನ್‌ನಲ್ಲಿದ್ದಾರೆ” ಎಂದರು.
“ಕೋವಿಡ್ ಸಂಬಂಧ ರಚಿಸಲಾಗಿರುವ ಕ್ಯಾಬಿನೆಟ್ ಉಪಸಮಿತಿ ಸಭೆಯಲ್ಲಿ JN.1 ಪ್ರಕರಣಗಳು ಸೇರಿದಂತೆ, ಕೋವಿಡ್ ನಿಯಂತ್ರಣ ಹಾಗೂ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು. ಸದ್ಯಕ್ಕೆ ಯಾವುದೇ ಹೊಸ ನಿರ್ಬಂಧವಿಲ್ಲ. ಈಗಾಗಲೇ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿಯನ್ನ ಹೊರಡಿಸಲಾಗಿದೆ” ಎಂದರು.
“ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರು ಮಾಸ್ಕ್ ಧರಿಸುವುದು ಉತ್ತಮ ಎಂಬುದು ನಮ್ಮ ಸಲಹೆ. ಇನ್ನು 60 ವರ್ಷ ಮೇಲ್ಪಟ್ಟವರು, ಇತರ ಕಾಯಿಲೆ ಹೊಂದಿದವರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ” ಎಂದು ಹೇಳಿದರು.
“JN.1 ಪ್ರಕರಣಗಳ ಸಂಬಂಧ ಯಾರು ಹೊಸದಾಗಿ ಗಾಬರಿಪಡುವ ಅಗತ್ಯವಿಲ್ಲ. ಬಹುತೇಕ JN.1 ಪ್ರಕರಣಗಳು ಬೆಂಗಳೂರಿನಲ್ಲೇ ಪತ್ತೆಯಾಗಿವೆ. ಬೆಂಗಳೂರಿನಲ್ಲಿ – 20, ಮೈಸೂರು – 4, ಮಂಡ್ಯ – 3 ಸೇರಿದಂತೆ ರಾಮನಗರದಲ್ಲಿ – 1 ಒಮೆಕ್ರಾನ್ ಉಪತಳಿ JN.1 ಪತ್ತೆಯಾಗಿದ್ದು, ಇಲ್ಲಿಯವರೆಗೆ ಕೋವಿಡ್ ಬಂದವರಲ್ಲಿ ಮೂವರು ಸಾವನ್ನಪ್ಪಿರುವುದು ವರದಿಯಾಗಿದೆ. ಸಾವನ್ನಪ್ಪಿದವರಲ್ಲೂ JN.1 ಪಾಸಿಟಿವ್ ಇದ್ದಿದ್ದು ವರದಿಯಲ್ಲಿ ಬೆಳಕಿಗೆ ಬಂದಿದೆ” ದಿನೇಶ್ ಗುಂಡೂರಾವ್ ವಿವರಿಸಿದರು.