ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಭಾಗದ ಕಾಡಾನೆ ಹಾವಳಿ ನಿಯಂತ್ರಿಸಲು ಭದ್ರಾ ಅಭಯಾರಣ್ಯದಲ್ಲಿ ಒಂದು ಆನೆ ಶಿಬಿರ ಸ್ಥಾಪಿಸುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಘೋಷಿಸಿದ್ದಾರೆ.
ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಸಭಾಂಗಣದಲ್ಲಿಂದು ನಡೆದ ಭದ್ರಾ ಹುಲಿ ಸಂರಕ್ಷಿತ ಪ್ರದೇಶ ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, “ರಾಜ್ಯದಲ್ಲಿ ವನ್ಯಜೀವಿ ಮತ್ತು ಮಾನವ ಸಂಘರ್ಷ ಹೆಚ್ಚಾಗುತ್ತಿದ್ದು, ಆನೆಗಳಿಂದ ಹೆಚ್ಚಿನ ಜೀವಹಾನಿ ಮತ್ತು ಬೆಳೆ ಹಾನಿ ಸಂಭವಿಸುತ್ತಿದೆ. ಇದನ್ನು ನಿಯಂತ್ರಿಸಲು 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆನೆ ವಿಹಾರ ಧಾಮ ಅಂದರೆ ಎಲಿಫೆಂಟ್ ಸಾಫ್ಟ್ ರಿಲೀಸ್ ಸೆಂಟರ್ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸುವಂತೆ ವನ್ಯಜೀವಿ ಪರಿಪಾಲಕರಿಗೆ ಸೂಚನೆ ನೀಡಿದ್ದೇನೆ” ಎಂದು ಹೇಳಿದರು.
“ಈ ಆನೆ ವಿಹಾರ ಧಾಮದ ಸುಮಾರು 5 ಸಾವಿರ ಎಕರೆ ಪ್ರದೇಶದಲ್ಲಿ ಆನೆಗಳಿಗೆ ಇಷ್ಟವಾದ ಬಿದಿರು, ಹಲಸು, ಹುಲ್ಲು ಇತ್ಯಾದಿ ಬೆಳೆಸಲಾಗುವುದು ಮತ್ತು ಸುತ್ತಲೂ ಬ್ಯಾರಿಕೇಡ್ ಅಳವಡಿಸಿ ಸೆರೆ ಹಿಡಿದ ಆನೆಗಳನ್ನು ಇಲ್ಲಿ ತಂದು ಬಿಡಲಾಗುವುದು. ಇದರಿಂದ ಕೊಡಗು, ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಡಿನ ಹೊರಗೆ ಇರುವ ಆನೆಗಳಿಂದ ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಸಾಧ್ಯವಾಗುತ್ತದೆ” ಎಂದು ವಿವರಿಸಿದರು.
ಭದ್ರಾ -ಸುಭದ್ರ ಅರಣ್ಯ
“ಭದ್ರಾ ಹುಲಿ ಅಭಯಾರಣ್ಯ ಒಂದು ಸಾವಿರ ಚದರ ಕಿಲೋ ಮೀಟರ್ ವ್ಯಾಪ್ತಿಯ ವಿಶಾಲವಾದ ಸುಭದ್ರ ಅರಣ್ಯವಾಗಿದೆ. ಇದು ವಿಶ್ವ ಪಾರಂಪರಿಕ ತಾಣವಾದ ಪಶ್ಚಿಮ ಘಟ್ಟಗಳ ಶ್ರೀಮಂತ ಅರಣ್ಯ ಸಂಪತ್ತನ್ನು ಒಳಗೊಂಡಿದೆ. ಕರ್ನಾಟಕ ಹುಲಿ ಸಂಖ್ಯೆಯಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಸುಮಾರು 563 ಹುಲಿಗಳಿವೆ. ಅಳಿವಿನಂಚಿನಲ್ಲಿರುವ ಹುಲಿಗಳನ್ನು ಸಂರಕ್ಷಿಸಲು ಅಂದಿನ ಪ್ರಧಾನಿ ಇಂದಿರಾಗಾಂಧೀ ಅವರು 1973ರಲ್ಲಿ ಆರಂಭಿಸಿದ ಹುಲಿ ಯೋಜನೆಗೆ 50 ವರ್ಷ ತುಂಬಿರುವುದೂ ಮತ್ತೊಂದು ಸಂತೋಷದಾಯಕ ವಿಚಾರವಾಗಿದೆ” ಎಂದರು.
“1980ರಲ್ಲಿ ದೇಶದಲ್ಲಿ ಕೇವಲ 1,827ರಷ್ಟಿದ್ದ ಹುಲಿಗಳ ಸಂಖ್ಯೆ ಈಗ 3ಸಾವಿರ ದಾಟಿದೆ. ಇದು ದೇಶದ ಅರಣ್ಯ ಇಲಾಖೆಯ ಸಿಬ್ಬಂದಿಯ ಪರಿಶ್ರಮದ ಫಲ ಎಂದ ಸಚಿವರು ರಾಜ್ಯದಲ್ಲಿ ಕೂಡ ಹುಲಿಗಳ ರಕ್ಷಣೆಗೆ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ಹಿಂದೆ ಚರ್ಮಕ್ಕಾಗಿ, ಉಗುರಿಗಾಗಿ ಹುಲಿಗಳ ಕಳ್ಳಬೇಟೆ ನಡೆಯುತ್ತಿತ್ತು. ಇದನ್ನು ಮನಗಂಡು ಅರಣ್ಯ ಇಲಾಖೆ ರಾಜ್ಯದ 5 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ 200ಕ್ಕೂ ಹೆಚ್ಚು ಕಳ್ಳಬೇಟೆ ತಡೆ ಶಿಬಿರ ಅಂದರೆ ಆಂಟಿ ಪೋಚಿಂಗ್ ಕ್ಯಾಂಪ್ ತೆರೆದಿದೆ. ಇದರಿಂದ ಕಳ್ಳಬೇಟೆ ನಿಂತಿದ್ದು, ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ” ಎಂದು ತಿಳಿಸಿದರು.
“ಭದ್ರಾ ಹುಲಿ ಸಂರಕ್ಷಿತ ಪ್ರದೇಶವು ನಿಸರ್ಗದತ್ತವಾದ ರಮಣೀಯ ಭೂಪ್ರದೇಶವನ್ನು ಒಳಗೊಂಡಿದೆ. ಇಲ್ಲಿ ವರ್ಷದ 365 ದಿನವೂ ನದಿ, ತೊರೆ, ಹಳ್ಳಗಳು ಹರಿಯುತ್ತಲೇ ಇರುತ್ತವೆ. ಜಲ ಸಮೃದ್ಧಿ, ಸಸ್ಯ ಸಂಕುಲ, ಪ್ರಾಣಿ ಸಂಕುಲ, ಕೀಟ ಸಂಕುಲ ಇರುವ ಈ ಪ್ರದೇಶ ಅತ್ಯಮೂಲ್ಯ ಜೀವವೈಧ್ಯತೆಯಿಂದ ಕೂಡಿದ್ದು, ನೂರಾರು ಪ್ರಬೇಧದ ವನ್ಯಜೀವಿಗಳಿಗೆ ನೆಲೆಯಾಗಿದೆ” ಎಂದರು.
40 ಹುಲಿಗಳ ತಾಣ
“ಭದ್ರಾ ಅರಣ್ಯವಾಸಿಗಳ ಪುನರ್ವಸತಿಯಾದ ನಂತರದಲ್ಲಿ ಮಾನವ ವನ್ಯಜೀವಿ ಸಂಘರ್ಷ ಗಣನೀಯವಾಗಿ ಕಡಿಮೆಯಾಗಿದ್ದು, ಆರಂಭದಲ್ಲಿ 8 ಹುಲಿಗಳನ್ನು ಹೊಂದಿದ್ದ ಈ ಸಂರಕ್ಷಿತ ಪ್ರದೇಶದಲ್ಲಿ ಪ್ರಸ್ತುತ 40 ಹುಲಿಗಳಿವೆ. ಇದಕ್ಕೆ ಕಾರಣ ಹುಲಿಗಳ ಆವಾಸಸ್ಥಾನದ ಸಂರಕ್ಷಣೆಯೇ ಆಗಿದೆ. ಇಲ್ಲಿ ದಟ್ಟವಾದ ಕಾನನವಿದ್ದು, ಸುಮಾರು 400 ಕ್ಕೂ ಅಧಿಕ ಆನೆಗಳಿವೆ” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಚಿವರು ಭದ್ರಾ ರಜತ ಮಹೋತ್ಸವ ಸ್ಮರಣಾರ್ಥ ಅಂಚೆ ಚೀಟಿ, ಅಂತರ್ಜಾಲ ತಾಣ ಮತ್ತು ಕಿರು ಹೊತ್ತಗೆಗಳನ್ನು ಬಿಡುಗಡೆ ಮಾಡಿದರು.