Homeಕರ್ನಾಟಕಬಾಬಾನಗರದ ಬಳಿ ಹೊಸ ಕೆರೆ ನಿರ್ಮಾಣ, 550 ಕೋಟಿ ರೂ. ಅನುದಾನಕ್ಕೆ ಎಂ ಬಿ ಪಾಟೀಲ...

ಬಾಬಾನಗರದ ಬಳಿ ಹೊಸ ಕೆರೆ ನಿರ್ಮಾಣ, 550 ಕೋಟಿ ರೂ. ಅನುದಾನಕ್ಕೆ ಎಂ ಬಿ ಪಾಟೀಲ ಮನವಿ

ವಿಜಯಪುರ ಜಿಲ್ಲೆಯ ಬಬಲೇಶ್ವರ ಮತ್ತು ತಿಕೋಟಾ, ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮತ್ತು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿ ನೀರಾವರಿ ಮತ್ತು ಕುಡಿಯುವ ನೀರು ಪೂರೈಸುವ ತುಬುಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯಡಿಯಲ್ಲಿ ಬಾಬಾನಗರದ ಬಳಿ ಹೊಸದಾಗಿ ಕೆರೆ ನಿರ್ಮಿಸಲು 550 ಕೋಟಿ ರೂ. ಅನುದಾನ ಒದಗಿಸಬೇಕೆಂದು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಜಲಸಂಪನ್ಮೂಲ ಸಚಿವರೂ ಆಗಿರುವ ಡಿ ಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಉಪಮುಖ್ಯಮಂತ್ರಿಗಳನ್ನು ಸದಾಶಿವನಗರದ ನಿವಾಸದಲ್ಲಿ ಗುರುವಾರ ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, “ತುಬುಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಲ್ಲಿ 6.3 ಟಿಎಂಸಿ ನೀರನ್ನು ಮೇಲ್ಕಂಡ ತಾಲ್ಲೂಕುಗಳ 1.30 ಲಕ್ಷ ಎಕರೆಗೆ ಹರಿಸಲಾಗುತ್ತಿದೆ. ಇಲ್ಲಿ ಶೇ.60ರಷ್ಟು ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗುತ್ತಿದೆ. ಇದನ್ನು ಬಗೆಹರಿಸಲು ಬಾಬಾನಗರದ ಸಮೀಪ ಕೆರೆ ಕಟ್ಟಿ, 0.775 ಟಿಎಂಸಿ ನೀರನ್ನು ತುಂಬಲು ಅವಕಾಶವಿದೆ. ಇಲ್ಲಿ 679.25 ಎಕರೆ ಸರಕಾರಿ ಜಮೀನಿದ್ದು, ಈ ಪೈಕಿ 434 ಎಕರೆಯಲ್ಲಿ ಕೆರೆ ಕಟ್ಟಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ” ಎಂದು ವಿವರಿಸಿದರು.

“556.5 ಕೋಟಿ ವೆಚ್ಚದಲ್ಲಿ ಹೊಸ ಕೆರೆಯನ್ನು ನಿರ್ಮಿಸಲು ಚಿಂತಿಸಲಾಗಿದೆ. ಈ ನೀರನ್ನು ಬೇಸಿಗೆ ಕಾಲದಲ್ಲಿ ಜನ, ಜಾನುವಾರು ಮತ್ತು ಬೆಳೆಗಳಿಗೆ ಉಪಯೋಗಿಸಿಕೊಳ್ಳಬಹುದಾಗಿ. ಇದಕ್ಕೆ ತುಬುಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯ ಎರಡನೆಯ ವಿತರಣಾ ತೊಟ್ಟಿಯಿಂದ ನೀರು ಹರಿಸಲು ಅವಕಾಶವಿದೆ. ಇದಕ್ಕೆ ಜಪಸಂಪನ್ಮೂಲ ಇಲಾಖೆಯು ಸಕಾರಾತ್ಮಕವಾಗಿ ಸ್ಪಂದಿಸುವ ನಿರೀಕ್ಷೆ ಇದೆ” ಎಂದು ತಿಳಿಸಿದರು.

ರೈತರಿಗೆ ಸೂಕ್ತ ಪರಿಹಾರ ಸಿಗಬೇಕು

“ದೇವನಹಳ್ಳಿ ತಾ.ನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ನಿರ್ಮಾಣಕ್ಕೆ 10 ಗ್ರಾಮಗಳ ವ್ಯಾಪ್ತಿಗೆ ಸೇರಿರುವ 1,282 ಎಕರೆ ಭೂಮಿ ಅಗತ್ಯವಿದೆ. ಆದರೆ, ರೈತರು ಇದಕ್ಕೆ ವಿರೋಧ ವ್ಯಕ್ತಪಡಿಸಿ ಹೋರಾಡುತ್ತಿದ್ದಾರೆ. ಈ ಸಂಬಂಧ ಜುಲೈ 4ರ ಶುಕ್ರವಾರ ಸಿಎಂ ಜೊತೆ ಸಭೆ ಏರ್ಪಡಿಸಲಾಗಿದೆ. ಕೈಗಾರಿಕೆಗಳಿಗೆ ಜಮೀನು ಬೇಕಾಗುತ್ತದೆ. ಭೂಮಿ ಕಳೆದುಕೊಳ್ಳಲಿರುವ ರೈತರಿಗೆ ಹೊಸ ಕಾಯ್ದೆಯನ್ವಯ ಸೂಕ್ತ ಪರಿಹಾರ ಕೊಡಲಾಗುವುದು” ಎಂದು ಹೇಳಿದರು.

“ಕೈಗಾರಿಕಾ ರಂಗದಲ್ಲಿ ತಮಿಳುನಾಡು, ಗುಜರಾತ್, ಒಡಿಶಾ, ಅಸ್ಸಾಂ ಮತ್ತಿತರ ರಾಜ್ಯಗಳಿಂದ ನಮಗೆ ತೀವ್ರ ಸ್ಪರ್ಧೆ ಇದೆ. ಅಲ್ಲೆಲ್ಲ ಉದ್ಯಮಿಗಳಿಗೆ ಏನೇನು ಸೌಲಭ್ಯ ಕೊಡಲಾಗುತ್ತಿದೆ, ಕೈಗಾರಿಕಾ ನೀತಿಗಳು ಹೇಗಿವೆ ಎನ್ನುವುದರ ಅರಿವು ನನಗಿದೆ. ಕೈಗಾರಿಕೆ ಮತ್ತು ಕೃಷಿ ಎರಡೂ ಮುಖ್ಯವಾಗಿದ್ದು, ಸರಿದೂಗಿಸಿಕೊಂಡು ಹೋಗುವ ಕೆಲಸ ಅಗತ್ಯವಾಗಿದೆ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments