ನರೇಂದ್ರ ಮೋದಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು, ಪ್ರಜಾಪ್ರಭುತ್ವ ವಿರೋಧಿಯಾಗಿದ್ದಾರೆ. ಮೋದಿಯವರ ಸರ್ಕಾರದಲ್ಲಿ ಸಂವಿಧಾನ ಸುರಕ್ಷಿತವಾಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಅವರ ಪರ ಪ್ರಜಾಧ್ವನಿ -02 ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿ, “ನಾವು ಉಳಿಯಬೇಕಾದರೆ ಸಂವಿಧಾನ ಉಳಿಯಲೇಬೇಕು. ಸಂವಿಧಾನ ಉಳಿಯಬೇಕಾದರೆ ಕಾಂಗ್ರೆಸ್ ಗೆ ಮತ ಹಾಕಬೇಕು” ಎಂದು ಮನವಿ ಮಾಡಿದರು.
“ಮುಸಲೋನಿ, ಹಿಟ್ಲರ್ ಸಿದ್ಧಾಂತದಲ್ಲಿ ನಂಬಿಕೆ ಬಿಜೆಪಿ ಇಟ್ಟಿದ್ದಾರೆ. ಈ ದೇಶದಲ್ಲಿ ಸಂವಿಧಾನ ಜಾರಿಯಾದಾಗ ಅದನ್ನು ವಿರೋಧಿಸಿದ್ದು ಆರ್.ಎಸ್.ಎಸ್. ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲೇಬೇಕು” ಎಂದು ಸಿದ್ದರಾಮಯ್ಯ ಕೋರಿದರು.
“ಕಳೆದ ವಿಧಾನಸಭಾ ಚುನಾವಣೆಯಲ್ಲಿ 43 % ಮತಗಳನ್ನು ಪಡೆದು 136 ಸ್ಥಾನಗಳನ್ನು ಪಡೆದಿದ್ದೇವೆ. ಅಧಿಕಾರದಲ್ಲಿದ್ದ ವಿರೋಧ ಪಕ್ಷ ಕೇವಲ 66 ಸ್ಥಾನಗಳನ್ನು ಪಡೆಯಿತು. ಜಾತ್ಯಾತೀತ ಎಂದು ಹೇಳಿಕೊಳ್ಳುವ ಪಕ್ಷ 19 ಸ್ಥಾನಗಳನ್ನು ಪಡೆಯಿತು. ಈಗ ಅವರಿಬ್ಬರಿಗೂ ಈ ಚುನಾವಣೆಯಲ್ಲಿ ಭಯ ಬಂದಿದೆ. ಒಟ್ಟುಗೂಡಿ ಕಾಂಗ್ರಸ್ ಪಕ್ಷವನ್ನು ಎದುರಿಸುವ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
ಮೋದಿ ಬಿಟ್ಟರೆ ಬೇರೆ ಚುನಾವಣಾ ವಿಷಯವೇ ಇಲ್ಲ
“ಇವರಿಗೆ ಮೋದಿ ಬಿಟ್ಟರೆ ಬೇರೆ ಚುನಾವಣಾ ವಸ್ತುವೇ ಇಲ್ಲ. ಎನ್‍ಡಿಎ ನೇತೃತ್ವದಲ್ಲಿ 10 ವರ್ಷಗಳ ಕಾಲ ಪ್ರಧಾನ ಮಂತ್ರಿಯಾಗಿರುವ ಮೋದಿ 10 ವರ್ಷಗಳಲ್ಲಿ ಏನು ಹೇಳಿದ್ದರು? ಏನು ಮಡಿದ್ದಾರೆ ಎಂದು ಪರಿಶೀಲನೆ ಮಾಡಬೇಕು” ಎಂದರು.
“ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬನ ಮನೆಗೆ 15 ಲಕ್ಷ ಖಾತೆಗೆ ಹಾಕುವುದಾಗಿ ಹೇಳಿದ್ದರು. ಹಾಕಿದರೆ? ರೈತರ ಆದಾಯ 5 ವರ್ಷಗಳಲ್ಲಿ ದುಪ್ಪಟ್ಟು ಮಾಡುತ್ತೇನೆ ಎಂದಿದ್ದರು, ಮಾಡಿದರೆ? ರೈತರು ನೆಮ್ಮದಿಯಾಗಿದ್ದಾರೆಯೇ? ವರ್ಷಕ್ಕೆ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಹೇಳಿದ್ದರು, ಮಾಡಿದರೆ? ಈವರೆಗೆ 20 ಕೋಟಿ ಉದ್ಯೋಗಗಳನ್ನು ಸೃಷ್ಟಿಸಬೇಕಿತ್ತು ಆದರೆ ಈವರೆಗೆ 20 ಲಕ್ಷ ಉದ್ಯೋಗವನ್ನೂ ಸೃಷ್ಟಿಸಲಾಗಿಲ್ಲ. ಸ್ವಾಮಿನಾಥನ್ ಆಯೋಗದ ವರದಿಯ ಪ್ರಕಾರ ಒಂದು ಬೆಳೆ ತೆಗೆಯಲು ತಗಲುವ ಖರ್ಚಿನ ಮೇಲೆ ಶೇ50 ರಷ್ಟು ಕೊಡುವುದಾಗಿ ಹೇಳಿದ್ದರು. ನೂರು ರೂ.ಗಳನ್ನು ಖರ್ಚು ಮಾಡಿದ್ದರೆ 150 ರೂ.ಗಳನ್ನು ಖಚು ಮಾಡುವುದಾಗಿ ಹೇಳಿದ್ದರು ಇಂದಿನವರೆಗೆ ಜಾರಿ ಮಾಡಲಿಲ್ಲ. ಪೆಟ್ರೋಲ್, ಡೀಸಲ್, ಗ್ಯಾಸ್ ಬೆಲೆಯನ್ನು ಇಳಿಸುವುದಾಗಿ ಹೇಳಿದ್ದರು, ಅಕ್ಕಿ, ಬೇಳೆ, ರಾಗಿ ಜೋಳ ಬೆಲೆ ಇಳಿಯುತ್ತದೆ ಎಂದು ಹೇಳಿದ್ದರು. ಬೆಲೆಗಳನ್ನು ಇಳಿಸಲು ಪ್ರಯತ್ನ ಮಾಡಿದರೆ” ಎಂದು ಪ್ರಶ್ನೆಗಳನ್ನು ಕೇಳಿದರು.
ಅದಾನಿ, ಅಂಬಾನಿ, ಟಾಟಾ, ಬಿರ್ಲಾ ಅಭಿವೃದ್ಧಿಯಾದರು
“ಸಬ್ ಕಾ ಸಾತ್, ಸಬ್ ಕಾ ವಿಶ್ವಾಸ್ ಎನ್ನುತ್ತಾರೆ. ಈ ದೇಶದ 140 ಕೊಟಿ ಜನರ ಅಭಿವೃದ್ಧಿ ಎಂದರು ಇಂದಿಗೂ ಏನೂ ಮಾಡಲಿಲ್ಲ. ಇವರು ಅಭಿವೃದ್ಧಿ ಮಾಡಿದ್ದರು, ಅದಾನಿ, ಅಂಬಾನಿ, ಟಾಟಾ, ಬಿರ್ಲಾ ಅವರನ್ನು ಹೊರತು ಬಡವರ, ರೈತರ, ಮಹಿಳಯರ ಅಭಿವೃದ್ಧಿ ಆಗಲಿಲ್ಲ” ಎಂದು ಕುಟುಕಿದರು.