ಎಲ್ಲ ಶೋಷಿತ ವರ್ಗದವರಿಗೆ ನ್ಯಾಯ ಒದಗಿಸಿಕೊಡಲು, ಜನಸಂಖ್ಯೆ ಆಧಾರದ ಮೇಲೆ ಅವರಿಗೆ ಶಕ್ತಿ ತುಂಬಲು ರಾಹುಲ್ ಗಾಂಧಿ ಅವರು ದೇಶದಲ್ಲಿ ಜಾತಿ ಗಣತಿಗೆ ಕರೆ ನೀಡಿದ್ದಾರೆ. ರಾಜ್ಯದಲ್ಲಿ ಇದನ್ನು ಮಾಡಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.
ಚಿತ್ರದುರ್ಗದಲ್ಲಿ ಭಾನುವಾರ ನಡೆದ ಶೋಷಿತರ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, “ರಾಹುಲ್ ಗಾಂಧಿ ಅವರು ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸಲು ಹೋರಾಡುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಎಲ್ಲರಿಗೂ ಸಮಾನತೆ ಕಲ್ಪಿಸಲಾಗುವುದು. ಶೋಷಿತರಿಗೆ ಶಕ್ತಿ ನೀಡಬೇಕು ಎಂಬುದು ಕಾಂಗ್ರೆಸ್ ಸಂಕಲ್ಪ. ಕಾಂಗ್ರೆಸ್ ಸರ್ಕಾರ ನಿಮ್ಮ ಬದುಕಿನ ರಕ್ಷಣೆಗೆ ಬದ್ಧವಾಗಿದೆ” ಎಂದರು.
ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಶಕ್ತಿ
ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು,
ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು
ಇದನ್ನು ನೋಡಿ ಅರಳಿದ್ದ ಕಮಲ ಉದುರಿ ಹೋಯಿತು,
ಇದನ್ನು ನೋಡಿ ಮಹಿಳೆ ತೆನೆ ಎಸೆದು ಹೋದಳು,
ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು,
ಕರ್ನಾಟಕ ಸಮೃದ್ಧವಾಯಿತು,
ಕರ್ನಾಟಕ ಪ್ರಭುದ್ಧವಾಯಿತು” ಎಂದು ಕವನ ವಾಚಿಸಿದರು.
“ಇದೊಂದು ಐತಿಹಾಸಿಕ ಸಮಾವೇಶ. ರಾಜ್ಯದಲ್ಲಿ ಬದಲಾವಣೆ ಪರ್ವ ತರಲು ಈ ಶೋಷಿತರ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದವರು ಅಧಿಕಾರಕ್ಕೆ ಬಂದಂತೆ. ಇದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ” ಎಂದರು.
“ದೇವರು ವರವನ್ನೂ ನೀಡುವುದಿಲ್ಲ. ಶಾಪವನ್ನೂ ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ನಾವು ನಮ್ಮ ಬದುಕಿನಲ್ಲಿ ಸಿಗುವ ಅವಕಾಶವನ್ನು ಬಹಳ ಜಾಗೃತವಾಗಿ ಬಳಸಿಕೊಳ್ಳಬೇಕು. ಯಶಸ್ಸು ಯಾರ ಆಸ್ತಿಯೂ ಅಲ್ಲ. ಯಾವುದೇ ರಾಜ ಸದಾ ರಾಜನಾಗಿರಲು ಸಾಧ್ಯವಿಲ್ಲ. ಶ್ರೀಮಂತ ಸದಾ ಶ್ರೀಮಂತನಾಗಿರಲು ಸಾಧ್ಯವಿಲ್ಲ. ಎಲ್ಲರಿಗೂ ರಾಜನಾಗುವ ಹಾಗೂ ಶ್ರೀಮಂತನಾಗುವ ಅವಕಾಶವನ್ನು ಪ್ರಜಾಪ್ರಭುತ್ವ ವ್ಯವಸ್ಥೆ ಕಲ್ಪಿಸಿದೆ. ಇದೇ ಪ್ರಜಾಪ್ರಭುತ್ವದ ಶಕ್ತಿ” ಎಂದರು.
“ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ, ಭಗವದ್ಗೀತೆ, ಖುರಾನ್, ಬೈಬಲ್ ನಂತೆ ಪವಿತ್ರವಾದ ಗ್ರಂಥ. ಅವು ಧಾರ್ಮಿಕ ಗ್ರಂಥವಾದರೆ, ಸಂವಿಧಾನ ನಮ್ಮ ಬದುಕಿಗೆ ರಕ್ಷಣೆ ಹಾಗೂ ಆಶ್ರಯ ನೀಡುವ ಗ್ರಂಥ. ಹಸಿದವನ ಹೊಟ್ಟೆಗೆ ಅನ್ನ ನೀಡಬೇಕು, ಕಷ್ಟದಲ್ಲಿರುವವರ ಜೊತೆಯಾಗಿ ನಿಲ್ಲಬೇಕು, ನಿಮ್ಮ ಹೋರಾಟ ಮುಂದುವರಿಸಲು ನಾವು ಇಲ್ಲಿದ್ದೇವೆ” ಎಂದು ಹೇಳಿದರು.
“ಮನೆ ಎಂದಮೇಲೆ ಕಸ ಇರುತ್ತದೆ, ಬದುಕು ಎಂದ ಮೇಲೆ ಕಷ್ಟ ಇರುತ್ತದೆ. ಕಾಂಗ್ರೆಸ್ ಪಕ್ಷ ಇದೇ ಜಾಗದಲ್ಲಿ ದೊಡ್ಡ ಸಮಾವೇಶ ಮಾಡಿತ್ತು. ನಂತರ ನಿಮಗೆ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆವು. ದೇಶದಲ್ಲಿ ಯಾವುದಾದರೂ ಸರ್ಕಾರ ಕೇವಲ ಐದಾರು ತಿಂಗಳಲ್ಲಿ ಕೊಟ್ಟ ಮಾತಿನಂತೆ ಯೋಜನೆ ಜಾರಿ ಮಾಡಿದ್ದರೆ ಅದು ಸಿದ್ದರಾಮಯ್ಯ, ನಮ್ಮ ಕಾಂಗ್ರೆಸ್ ಸರ್ಕಾರ ಮಾತ್ರ” ಎಂದು ತಿಳಿಸಿದರು.