ಎಲ್ಲ ಜನರನ್ನು ಗುರುತಿಸಿ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಎಸ್ಟಿ ಪಂಗಡಕ್ಕೆ ಸೇರಿದ ಹಿಂದುಳಿದ ಪ್ರದೇಶದಲ್ಲಿದ್ದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದೇವೆ. ಪರಿಶಿಷ್ಟ ಜಾತಿ ಪಂಗಡದ ಕಲ್ಯಾಣಕ್ಕೆ ಕಾಂಗ್ರೆಸ್ ಯಾವುದೇ ಕ್ರಮ ಕೈಗೊಂಡಿರಲ್ಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಬಂದ ಮೇಲೆ ಇದೆಲ್ಲ ಸಾಧ್ಯವಾಯಿತು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಭಾರತೀಯ ಜನತಾ ಪಕ್ಷ ಕರ್ನಾಟಕದ “ಪರಿಶಿಷ್ಟ ಪಂಗಡಗಳ ಮಹಾ ಸಮಾವೇಶ”ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಬಸವರಾಜ ಬೊಮ್ಮಾಯಿ ಸರ್ಕಾರ ಇದ್ದಾಗ ಯಡಿಯೂರಪ್ಪ ಅವರ ಆಶೀರ್ವಾದದಿಂದ ಎಸ್ಟಿ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಏರಿಸಿದ್ದೇವೆ” ಎಂದರು.
“ಬಿರ್ಸಾ ಮುಂಡಾ ಯಾರು ಅಂತಾ ಮರೆತೇ ಹೋಗಿತ್ತು. ಅವರನ್ನು ಮರೆತು ಹೋಗುವಂತೆ ಮಾಡಿದ್ದ ನೀಚ ಪಾರ್ಟಿ ಕಾಂಗ್ರೆಸ್. ಎಲ್ಲಿ ತಪ್ಪಿದೆ ಅದನ್ನ ಸರಿಪಡಿಸಿಕೊಂಡು ಹೋಗಿ. ಜನರಿಗೆ ಮಾಹಿತಿ ಕೊಡಲು ನಾವು ಇಲ್ಲಿ ಸೇರಿದ್ದೇವೆ. ಭಗವಾನ್ ಬಿರ್ಸಾ ಮುಂಡಾ ಅವರು ಬ್ರಿಟಿಷರ ನಿದ್ದೆಗೆಡಿಸಿದ್ದ ಪರಿಶಿಷ್ಟ ಪಂಗಡದವರು, ಆದಿವಾಸಿಗಳ ನೇತೃತ್ವ ವಹಿಸಿದ್ದರು” ಎಂದು ಸ್ಮರಿಸಿದರು.
“ಎಲ್ಲಿ ತಪ್ಪಾಗಿದೆ ಅಂತಾ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಪಕ್ಷದಲ್ಲಿ ಎಸ್ಟಿ ಸಮುದಾಯದವರು ಯಾರು ಗೆದ್ದಿಲ್ಲ. ಪರಿಶಿಷ್ಟ ಪಂಗಡದ ಆಕ್ಷನ್ ಕಮಿಟಿಗೆ 1.8 ಲಕ್ಷ ಭೂಮಿಯನ್ನು ವಿತರಿಸಿದ್ದೇವೆ. ಮುದ್ರಾ ಯೋಜನೆಯಡಿ ಎಸ್ಟಿ ಎಸ್ಸಿ ಸಮುದಾಯದವರಿಗೆ ಶೇ.50ರಷ್ಟು ಸಾಲ ಸಿಕ್ಕಿದೆ. ಏಕಲವ್ಯ ಶಾಲೆಯನ್ನ ನಿರ್ಲಕ್ಷ್ಯ ಮಾಡಲಾಗಿತ್ತು. 38 ಸಾವಿರ ಶಿಕ್ಷಕರನ್ನು ನೇಮಿಸಿದ್ದು ನರೇಂದ್ರ ಮೋದಿ ಸರ್ಕಾರ” ಎಂದು ಹೇಳಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಸಂಬಂಧ ಕೇಂದ್ರಕ್ಕೆ ಶಿಫಾರಸು ಮಾಡಿದ ವಿಚಾರವಾಗಿ ಮಾತನಾಡಿದ ಜೋಶಿ, “ಕಾನೂನು ಸಂವಿಧಾನ ಪ್ರಕಾರವಾಗಿ ಬೊಮ್ಮಾಯಿ ಸರ್ಕಾರ ಏನು ಮಾಡಬೇಕೋ ಅದನ್ನು ಮಾಡಿದೆ. ಮುಂದೆ ಏನಾದರೂ ನಮ್ಮದು ಜವಾಬ್ದಾರಿ ಇದ್ದರೆ ಮಾಡುತ್ತೇವೆ. ಸರ್ಕಾರ ಏನು ಪ್ರಸ್ತಾವನೆ ಕೊಟ್ಟಿದೆ ಎಂದು ಪರಿಶೀಲಿಸಿ ತೀರ್ಮಾನ ಮಾಡುತ್ತೇವೆ” ಎಂದರು.