Homeಕರ್ನಾಟಕಕಾಂಗ್ರೆಸ್‌ ಸರ್ಕಾರ ಮಾಡಿದ್ದು ಜಾತಿ ಗಣತಿ: ಹೆಚ್‌ ಡಿ ಕುಮಾರಸ್ವಾಮಿ ಆರೋಪ

ಕಾಂಗ್ರೆಸ್‌ ಸರ್ಕಾರ ಮಾಡಿದ್ದು ಜಾತಿ ಗಣತಿ: ಹೆಚ್‌ ಡಿ ಕುಮಾರಸ್ವಾಮಿ ಆರೋಪ

ರಾಜ್ಯ ಕಾಂಗ್ರೆಸ್‌ ಸರ್ಕಾರ ಮಾಡಿದ್ದು ಜಾತಿ ಗಣತಿ! ಮುಖ್ಯಮಂತ್ರಿ ಮಹೋದಯರ ಪ್ರಕಾರ ಅದು ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ! ಸಿದ್ದರಾಮಯ್ಯ ಅವರು ಈಗ ಉಲ್ಟಾ ಹೊಡೆದಿದ್ದಾರೆ! ‘ಅದು ಜಾತಿ ಸಮೀಕ್ಷೆ ಅಲ್ಲ.. ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ’ ಎಂದು ಹೊಸ ಪೀಪಿ ಊದುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.

“ಹಾಗಾದರೆ ಹಾದಿ ಬೀದಿಯಲ್ಲಿ ತೇಲಾಡುತ್ತಿರುವ, ಬಿದ್ದೂಬಿದ್ದು ಹೊರಳಾಡುತ್ತಿರುವ ಅಂಕಿ ಸಂಖ್ಯೆಗಳು ಏನು? ಸೋರಿಕೆಯಾಗಿರುವ ದತ್ತಾಂಶ ಮತ್ತು ಸಿಎಂ ಅವರು ಹೇಳಿದ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ದತ್ತಾಂಶವು ಎರಡೂ ಒಂದೇನಾ ಅಥವಾ ಅಲ್ಲವಾ” ಎಂದು ಎಕ್ಸ್‌ ತಾಣದಲ್ಲಿ ಪ್ರಶ್ನಿಸಿದ್ದಾರೆ.

“ವರದಿ ಬಹಿರಂಗಕ್ಕೆ ಮೊದಲೇ ವ್ಯವಸ್ಥಿತವಾಗಿ ಸೋರಿಕೆ ಮಾಡಿದ್ದು ಯಾರು? ಅದರ ಹಿಂದಿರುವ ಕಳ್ಳ ಕೈ ಯಾವುದು? ಬೀದಿಪಾಲಾದ ದತ್ತಾಂಶ ಇಟ್ಟುಕೊಂಡು ಏನು ಮಾಡುತ್ತೀರಿ? ಸಿಎಂ ಸಾಹೇಬರೇ, ಸೋರಿಕೆ ಬಗ್ಗೆ ತಪ್ಪದೇ ತನಿಖೆ ಮಾಡಿಸಿ. ಅದು ಆಯೋಗದಿಂದ ಸೋರಿಕೆ ಆಯಿತಾ? ಅಥವಾ ಸಂಪುಟದಲ್ಲಿ ಸಚಿವರ ಕೈ ಸೇರಿದ ಮೇಲೆ ಸೋರಿಕೆ ಆಯಿತಾ? ಅಥವಾ ನಿಮ್ಮ ಗ್ಯಾಂಗ್ ಕೈ ಚಳಕವಾ? ತನಿಖೆ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡುತ್ತೀರಾ? ನೀವೇ ಹೇಳಬೇಕು” ಎಂದು ಆಗ್ರಹಿಸಿದ್ದಾರೆ.

“ಸೋರಿಕೆಗೆ ನಿಮ್ಮ ಸರಕಾರವೇ ಹೊಣೆ, ಸಂಶಯವೇ ಇಲ್ಲ. ಯಾವುದೇ ಕಾರಣಕ್ಕೂ ಸೋರಿಕೆಯಾದ ಈ ವರದಿಯನ್ನು ಸಂಪುಟದಲ್ಲಿ ಮಂಡಿಸಲೇಬಾರದು. ಮಂಡಿಸಿ ಸಂಪುಟದ ಪಾವಿತ್ರ್ಯತೆ ಹಾಳು ಮಾಡಬೇಡಿ” ಎಂದಿದ್ದಾರೆ.

“ನೆಮ್ಮದಿಯಾಗಿದ್ದ ರಾಜ್ಯಕ್ಕೆ ಬೆಂಕಿ ಹಾಕಿದ್ದೀರಿ, ಜಾತಿಗಳ ಮಧ್ಯೆ ವಿಷಬೀಜ ಬಿತ್ತಿದ್ದೀರಿ. ನಿಮ್ಮ ದುರುದ್ದೇಶ, ದುಷ್ಟತನದ ಪರಾಕಾಷ್ಠೆ ಇದು. ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಕೊಳ್ಳಿ ಇಟ್ಟ ಪಾಪ ಸುಮ್ಮನೆ ಬಿಡುವುದಿಲ್ಲ” ಎಂದು ಎಚ್ಚರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments