Homeಕರ್ನಾಟಕಕಾಂಗ್ರೆಸ್ ಮುಕ್ತ ಭಾರತ ಅಸಾಧ್ಯ ಎಂಬುದು ಸಾಬೀತಾಗಿದೆ: ಡಿಸಿಎಂ ಡಿ ಕೆ ಶಿವಕುಮಾರ್

ಕಾಂಗ್ರೆಸ್ ಮುಕ್ತ ಭಾರತ ಅಸಾಧ್ಯ ಎಂಬುದು ಸಾಬೀತಾಗಿದೆ: ಡಿಸಿಎಂ ಡಿ ಕೆ ಶಿವಕುಮಾರ್

10 ವರ್ಷಗಳ ನಂತರ ಕಾಂಗ್ರೆಸ್ ಪಕ್ಷ 100ರ ಗಡಿ ದಾಟಿದ್ದು, ಜನರು ಮತ್ತೆ ಕಾಂಗ್ರೆಸ್ ಪಕ್ಷದ ಮೇಲೆ ಭರವಸೆ ಇಟ್ಟಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ಮಾಡಲು ಸಾಧ್ಯವಿಲ್ಲ ಎಂಬುದನ್ನು ಈ ಚುನಾವಣೆ ಮನದಟ್ಟು ಮಾಡಿದೆ‌ ಎಂದು ಡಿಸಿಎಂ ಡಿ ಕೆ ಶಿವಕುಮಾರ್‌ ಹೇಳಿದರು.

ಲೋಕಸಭೆ ಚುನಾವಣೆ ಫಲಿತಾಂಶ ಕುರಿತಂತೆ ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, “ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಭಾವನೆಗಿಂತ ಬದುಕು ಗೆದ್ದಿದೆ. ಉತ್ತರ ಭಾರತದ ರಾಜ್ಯಗಳಲ್ಲೂ ಮೋದಿ ಹಾಗೂ ರಾಮಮಂದಿರದ ಅಲೆ ಇಲ್ಲವಾಗಿದೆ ಎಂಬುದನ್ನು ಚುನಾವಣೆ ಫಲಿತಾಂಶ ಸಾಬೀತುಪಡಿಸಿದೆ” ಎಂದರು.

“ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ನಿರಂತರ ಪರಿಶ್ರಮ ಹೋರಾಟದಿಂದ ಪಕ್ಷ ಚೇತರಿಕೆ ಕಂಡಿದೆ. ಪ್ರಿಯಾಂಕಾ ಗಾಂಧಿ ಅವರ ಕೊಡುಗೆ ಸಾಕಷ್ಟು ಇದೆ. ಕಾಂಗ್ರೆಸ್ ಪಕ್ಷದ ಮತ ಪ್ರಮಾಣ ಕೂಡ ಹೆಚ್ಚಾಗಿದೆ” ಎಂದು ಹೇಳಿದರು.

“ಹಳೇ ಮೈಸೂರು ಭಾಗದಲ್ಲಿ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಲೋಕಸಭೆ ಚುನಾವಣೆ ಮತ ಪ್ರಮಾಣ ಕುಸಿದಿದ್ದು, ಮೊದಲಿನಿಂದಲೂ ಈ ರೀತಿ ವ್ಯತ್ಯಾಸ ಕಂಡು ಬಂದಿದೆ. ಎಸ್ ಎಂ ಕೃಷ್ಣ ಅವರ ಸರಕಾರ ಇದ್ದಾಗಲೂ ಹೀಗೆ ಆಗಿತ್ತು. ಅದು ಈ ರಾಜ್ಯದ ರಾಜಕೀಯ ಗುಣ. ಈ ಬಾರಿ ಬದಲಾಗಬಹುದು ಅಂದುಕೊಂಡಿದ್ದೆವು. ಆದರೆ ಆಗಲಿಲ್ಲ” ಎಂದು ತಿಳಿಸಿದರು.

“ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ರಾಜ್ಯ ಹಾಗೂ ದೇಶದಲ್ಲಿ ಜನರ ತೀರ್ಪನ್ನು ಗೌರವಿಸುತ್ತೇನೆ. ಅಧಿಕಾರ ರಾಜಕೀಯಕ್ಕಿಂತ ವಿಶ್ವಾಸ ರಾಜಕೀಯ ಗೆದ್ದಂತಾಗಿದೆ. ದೇಶದಲ್ಲಿ ಭಾವನೆ ಸೋತಿದ್ದು, ಬದುಕು ಗೆದ್ದಿದೆ. ಬಿಜೆಪಿಯವರು 400 ಸೀಟುಗಳನ್ನು ಗೆಲ್ಲುತ್ತೇವೆ ಎಂದು ಹೇಳುತ್ತಿದ್ದರು. ಅದು ಸಾಧ್ಯವಾಗಿಲ್ಲ. ಅಯೋದ್ಯೆಯಲ್ಲೇ ಬಿಜೆಪಿ ಸೋತಿದೆ” ಎಂದರು.

ಮಂಜುನಾಥ್ ಅವರಿಗೆ ಅಭಿನಂದನೆಗಳು

“ರಾಜ್ಯದಲ್ಲಿ ನಾವು 1 ಸ್ಥಾನದಿಂದ 9 ಸ್ಥಾನಗಳಿಗೆ ಏರಿಕೆ ಕಂಡಿದ್ದೇವೆ. ನಾವು 14 ಸ್ಥಾನಗಳ ನಿರೀಕ್ಷೆಯಲ್ಲಿದ್ದೆವು. ನನ್ನ ಸಹೋದರ ಗೆಲ್ಲುವ ನಿರೀಕ್ಷೆ ಇತ್ತು. ಮತದಾರರು ಡಾ. ಮಂಜುನಾಥ್ ಅವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅವರ ಗೆಲುವಿಗೆ ವೈಯಕ್ತಿಕವಾಗಿ ಅಭಿನಂದಿಸುತ್ತೇನೆ. ಅವರ ಪಕ್ಷ ಗೆಲ್ಲುವುದಕ್ಕಿಂತ ಇಲ್ಲಿ ವ್ಯಕ್ತಿ ಗೆದ್ದಿದ್ದಾರೆ” ಎಂದರು.

“ಬಹಳ ಲೆಕ್ಕಾಚಾರದಲ್ಲಿ ಅವರನ್ನು ಬಿಜೆಪಿಯಿಂದ ಸ್ಪರ್ಧಿಸುವಂತೆ ಮಾಡಿದ್ದರು. ಇಷ್ಟು ದೊಡ್ಡ ಅಂತರದ ಸೋಲಿನ ನಿರೀಕ್ಷೆ ಮಾಡಿರಲಿಲ್ಲ. ನನ್ನ ತಮ್ಮ ಉತ್ತಮ ಕೆಲಸ ಮಾಡಿದ್ದು, ಆಡಳಿತ ವಿರೋಧಿ ಅಲೆ ಇರಲಿಲ್ಲ. ಆದರೆ ಮಂಜುನಾಥ್ ಅವರಿಗೆ ಅವಕಾಶ ನೀಡಬೇಕು ಎಂದು ಜನ ಅವರನ್ನು ಗೆಲ್ಲಿಸಿದ್ದಾರೆ” ಎಂದು ವಿಶ್ಲೇಷಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments