ಸಿ ಪಿ ಯೋಗೇಶ್ವರ್ ಅವರಲ್ಲಿ ಹರಿಯುತ್ತಿರುವುದು ಕಾಂಗ್ರೆಸ್ ರಕ್ತ. ಈ ಕಾರಣಕ್ಕೆ ಯಾವುದೇ ಷರತ್ತುಗಳನ್ನು ವಿಧಿಸದೆ ಮತ್ತೊಮ್ಮೆ ಮರಳಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಅವರನ್ನು ಕಾಂಗ್ರೆಸ್ಗೆ ಬರಮಾಡಿಕೊಂಡು ಮಾತನಾಡಿದರು.
“ಕಾಂಗ್ರೆಸ್ ಪಕ್ಷದಿಂದಲೇ ಅವರ ರಾಜಕಾರಣ ಪ್ರಾರಂಭವಾಗಿತ್ತು. ಮತ್ತೊಮ್ಮೆ ಇದೇ ಪಕ್ಷದಿಂದಲೇ ರಾಜಕಾರಣ ಪ್ರಾರಂಭ ಮಾಡಬೇಕು ಎಂದು ಸಿ.ಪಿ.ಯೋಗೇಶ್ವರ್ ಅವರು ಬುಧವಾರ (ಇಂದು) ಬೆಳಿಗ್ಗೆ ಭೇಟಿ ಮಾಡಿ ತಮ್ಮ ಅಭಿಪ್ರಾಯ ತಿಳಿಸಿದರು” ಎಂದರು.
“ಯೋಗೇಶ್ವರ್ ಅವರ ಪಕ್ಷ ಸೇರ್ಪಡೆ ವಿಚಾರವನ್ನು ಮುಖ್ಯಮಂತ್ರಿಗಳ ಬಳಿ ದೂರವಾಣಿಯಲ್ಲಿ ಚರ್ಚೆ ಮಾಡಿದೆ. ನಂತರ ಪಕ್ಷದ ಎಲ್ಲ ಮುಖಂಡರ ಬಳಿ ಸಮಾಲೋಚನೆ ನಡೆಸಿದೆ. ನಮ್ಮ ಬಳಿ ಹೆಚ್ಚು ಸಮಯವಿಲ್ಲದೇ ಇರುವ ಕಾರಣಕ್ಕೆ ಬುಧವಾರ (ಇಂದು) ಬೆಳಿಗ್ಗೆಯೇ ಮುಖ್ಯಮಂತ್ರಿಗಳ ನಿವಾಸದಲ್ಲಿ ಮತ್ತೊಂದು ಸುತ್ತಿನ ಚರ್ಚೆ ನಡೆಸಿದೆ. ಇವರ ಪಕ್ಷ ಸೇರ್ಪಡೆ ಬಗ್ಗೆ ವರಿಷ್ಠರ ಗಮನಕ್ಕೆ ತಂದು ಎಲ್ಲರ ಒಪ್ಪಿಗೆ ಮೇರೆಗೆ ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೀಡಲಾಗಿದೆ” ಎಂದು ಹೇಳಿದರು.
ರಾಜಕಾರಣ ಸಾಧ್ಯತೆಗಳ ಕಲೆ
“ರಾಜಕಾರಣ ಸಾಧ್ಯತೆಗಳ ಕಲೆ. ಯೋಗೇಶ್ವರ್ ಅವರು ಮರಳಿ ಗೂಡಿಗೆ ಬಂದಿದ್ದಾರೆ. ಎಸ್ಪಿ, ಬಿಜೆಪಿ, ಸ್ವತಂತ್ರ ಅಭ್ಯರ್ಥಿಯಾಗಿ ಕೆಲಸ ಮಾಡಿದ್ದಾರೆ. ಜೆಡಿಎಸ್ ಜೊತೆಗೂ ಜಿಲ್ಲೆಯಲ್ಲಿ ಮೈತ್ರಿ ಮಾಡಿಕೊಂಡು ಎನ್ಡಿಎ ಅಭ್ಯರ್ಥಿಯನ್ನು ಗೆಲ್ಲಿಸಿದ್ದರು. ರಾಜಕೀಯ ಸನ್ನಿವೇಶ ಬದಲಾದ ಕಾರಣಕ್ಕೆ ಮತ್ತೆ ನಮ್ಮೊಡನೆ ಕೈಜೋಡಿಸಿದ್ದಾರೆ” ಎಂದು ವಿವರಿಸಿದರು.
“ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಕುಮಾರಸ್ವಾಮಿ ಅವರು ಗೆದ್ದಿದ್ದರು. ನಮ್ಮ ಪಕ್ಷ 16 ಸಾವಿರ ಮತಗಳನ್ನು ಚನ್ನಪಟ್ಟಣದಲ್ಲಿ ಗಳಿಸಿತ್ತು. ಲೋಕಸಭಾ ಚುನಾವಣೆಯಲ್ಲಿ ಸುರೇಶ್ ಅವರು 85 ಸಾವಿರ ಮತಗಳನ್ನು ಪಡೆದಿದ್ದೆವು. ಅನೇಕ ಮಂದಿ ಜನತಾದಳದಿಂದ ಬಂದು ನಮಗೆ ಸಹಾಯ ಮಾಡಿದ್ದರು. ನಂತರ ಸ್ಥಾನ ತೆರವುಗೊಂಡ ನಂತರ ಸುಮಾರು 15ಕ್ಕೂ ಹೆಚ್ಚು ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದೆ” ಎಂದರು.
ಪಕ್ಷ ಕಟ್ಟಿದ ಕಾರ್ಯಕರ್ತರ ಜೊತೆ ನಾವಿದ್ದೇವೆ
“ನಮ್ಮ ಕಾರ್ಯಕರ್ತರು ಕ್ಷೇತ್ರದಲ್ಲಿ ಪಕ್ಷವನ್ನು ತಳಮಟ್ಟದಿಂದ ಗಟ್ಟಿ ಮಾಡಲು ಶ್ರಮವಹಿಸಿದ್ದರು. ಪಕ್ಷದ ನಿಷ್ಟಾವಂತ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಮುಜುಗರಕ್ಕೆ ಒಳಗಾಗುವ ಪ್ರಮೇಯವನ್ನು ನಾವು ಉಂಟು ಮಾಡುವುದಿಲ್ಲ. ನಿಮ್ಮ ಜೊತೆ ನಾನು ಹಾಗೂ ಡಿ.ಕೆ.ಸುರೇಶ್ ಇದ್ದೇವೆ. ನಿಮ್ಮನ್ನು ಉತ್ತಮವಾದ ರೀತಿಯಲ್ಲಿ ನಡೆಸಿಕೊಳ್ಳುತ್ತೇವೆ. ಇದೇ ಮಾತನ್ನು ಯೋಗೇಶ್ವರ್ ಅವರಿಗೆ ಸೂಚನೆ ಕೊಟ್ಟಿದ್ದೇವೆ. ಅವರೂ ಸಹ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಿಗೆ ಕೆಲಸ ಮಾಡುತ್ತಾರೆ. ಚನ್ನಪಟ್ಟಣಕ್ಕೆ ವಿಶೇಷ ಸ್ಥಾನಮಾನ ನೀಡುತ್ತೇವೆ. ಕಾರ್ಯಕರ್ತರು ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಕೆಲಸ ಮಾಡಬೇಕು ಎಂದು ಸೂಚನೆ ನೀಡಿದ್ದೇನೆ” ಎಂದು ಸೂಚಿಸಿದರು.
ನಾಳೆ (ಗುರುವಾರ) ನಾಮಪತ್ರ ಸಲ್ಲಿಕೆ ಕಾರ್ಯಕ್ರಮ
“ಇಂದೇ (ಬುಧವಾರ) ಹೈಕಮಾಂಡ್ ಗೆ ಸ್ಪರ್ಧಿಸುವವರ ಪಟ್ಟಿಯನ್ನು ಕಳುಹಿಸಲಾಗುವುದು. ಮಲ್ಲಿಕಾರ್ಜುನ ಖರ್ಗೆ ಅವರು ಪಟ್ಟಿ ಅಂತಿಮ ಮಾಡುತ್ತಾರೆ. ಚನ್ನಪಟ್ಟಣದ ಅಭ್ಯರ್ಥಿ ಆಯ್ಕೆ ಮಾಡುವ ವಿಚಾರವನ್ನು ಡಿ.ಕೆ.ಸುರೇಶ್ ಅವರ ಜವಾಬ್ದಾರಿಗೆ ವಹಿಸಲಾಗಿತ್ತು. ಅವರು ಈಗಾಗಲೇ ಖರ್ಗೆ ಅವರ ಬಳಿ ಮಾತನಾಡಿದ್ದಾರೆ. ಗುರುವಾರ ಬೆಳಿಗ್ಗೆ 11 ಗಂಟೆಗೆ ನಡೆಯುವ ನಾಮಪತ್ರ ಸಲ್ಲಿಕೆ ವೇಳೆ ಎಲ್ಲರೂ ಭಾಗವಹಿಸಬೇಕು” ಎಂದು ಮನವಿ ಮಾಡಿದರು.
ಅಭ್ಯರ್ಥಿ ಕೊರತೆಯಿಂದ ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತೇ ಎಂದು ಕೇಳಿದಾಗ “ಕಾಂಗ್ರೆಸ್ ಪಕ್ಷಕ್ಕೆ ಎಂದಿಗೂ ಅಭ್ಯರ್ಥಿಗಳ ಕೊರತೆ ಕಾಣುವುದಿಲ್ಲ. ನಾನು ಇಲ್ಲದಿದ್ದರೂ ಪಕ್ಷ ನಡೆಯುತ್ತದೆ” ಎಂದರು.
ಡಿ.ಕೆ.ಸುರೇಶ್ ಅವರನ್ನು ಸೋಲಿಸಿದವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದೀರಿ ಎಂದು ಕೇಳಿದಾಗ, “ಇದರ ಬಗ್ಗೆ ನಮ್ಮ ಕಾರ್ಯಕರ್ತರ ಬಳಿ ಚರ್ಚೆ ನಡೆಸಿದ್ದೇವೆ. ಇದು ಎಲ್ಲಾ ಪಕ್ಷದಲ್ಲಿಯೂ ಇದ್ದಿದ್ದೇ. ನಮ್ಮಲ್ಲಿ ಮಾತ್ರ ಇದು ನಡೆದಿಲ್ಲ. ಇದೊಂದು ರಾಜಕೀಯ ವಿದ್ಯಮಾನವಷ್ಟೇ” ಎಂದರು.