Homeಕರ್ನಾಟಕಪ್ರಲ್ಹಾದ್ ಜೋಶಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಾಜ್ಯಪಾಲರಿಗೆ ಸಚಿವರಿಂದ ದೂರು

ಪ್ರಲ್ಹಾದ್ ಜೋಶಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಾಜ್ಯಪಾಲರಿಗೆ ಸಚಿವರಿಂದ ದೂರು

ಕೋವಿಡ್ ಹಗರಣಗಳ ತನಿಖೆ ನಡೆಸಿ ವರದಿ ನೀಡಿರುವ ನಿವೃತ್ತ ನ್ಯಾಯಾಧೀಶ ಮೈಕಲ್ ಡಿ ಕುನ್ಹಾ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿರುವ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಚಿವರಾದ ಕೃಷ್ಣ ಬೈರೇಗೌಡ ಹಾಗೂ ದಿನೇಶ್ ಗುಂಡೂರಾವ್ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರನ್ನು ಸೋಮವಾರ ಉಭಯ ಸಚಿವರು ಭೇಟಿ ಮಾಡಿ ಪ್ರಲ್ಹಾದ್ ಜೋಶಿ ವಿರುದ್ಧ ಕ್ರಮಕ್ಕೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡುವಂತೆ ಮನವಿ ಮಾಡಿದರು.

ರಾಜ್ಯಪಾಲರ ಭೇಟಿ ಬಳಿಕ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, “ಪ್ರಲ್ಹಾದ್ ಜೋಶಿ ಹೇಳಿಕೆ ಖಂಡಿಸಿ ಕ್ರಮಕ್ಕೆ ಒತ್ತಾಯಿಸಿ ದೂರು ನೀಡಿದ್ದೇವೆ. ನ್ಯಾಯಾಂಗ ತನಿಖಾ ಆಯೋಗದ‌ ಬಗ್ಗೆ ಹಾಗೂ ನಿವೃತ್ತ ನ್ಯಾಯಾಧೀಶರ ಬಗ್ಗೆ ನಿಂದಿಸಿ ಕೆಟ್ಟದಾಗಿ ಮಾತನಾಡಿದ್ದಾರೆ. ಇದು ಅಹಂಕಾರದ ಪರಮಾವಧಿ” ಎಂದು ಹರಿಹಾಯ್ದರು.

“ಇಂತಹ ಹೇಳಿಕೆ ಕೊಟ್ಟವರ ವಿರುದ್ದ ಕ್ರಮ ಕೈಗೊಂಡು ಒಂದು ಸಂದೇಶ ಕೊಡಬೇಕು. ಹೀಗೆ ಆದರೆ ಯಾವ ಸ್ವಾಯತ್ತ ಸಂಸ್ಥೆಗಳು ಉಳಿಯುವುದಿಲ್ಲ. ಪ್ರಲ್ಹಾದ್ ಜೋಶಿ ಇಂತಹ ಹೇಳಿಕೆ ಕೊಡುವ ಮೂಲಕ ಅತ್ಯಂತ ದೊಡ್ಡ ದ್ರೋಹ ಮಾಡಿದ್ದಾರೆ. ಉನ್ನತ ಸ್ಥಾನದಲ್ಲಿರುವ ನಾವು ಇಂತಹ ಸಂಸ್ಥೆಗಳ, ಆಯೋಗಗಳ ಗೌರವ ಕಾಪಾಡಬೇಕು. ರಾಷ್ಟಪತಿಗಳ ಗಮನಕ್ಕೂ ಇದನ್ನು ತರಬೇಕು. ಕೇಂದ್ರ ಸರ್ಕಾರ ನಮ್ಮದೇ ಇದೆ ಎಂದು ಏನು ಬೇಕಾದ್ರು ಮಾಡಬಹುದು ಅಂದುಕೊಂಡಿದ್ದಾರೆ‌. ಕೂಡಲೇ ಕ್ಷಮೆಯಾಚಿಸಿ ಮುಂದೆ ಆ ರೀತಿ ಹೇಳಲ್ಲ ಅಂತ ಕ್ಷಮೆ ಯಾಚಿಸಬೇಕು” ಎಂದು ಒತ್ತಾಯಿಸಿದರು.

“ನ್ಯಾಯಾಂಗ ತನಿಖಾ ಆಯೋಗದ ವಿರುದ್ಧ ಸಂಶಯ ಮೂಡಿಸುವಂತಿಲ್ಲ. ನ್ಯಾಯಾಲಯದ ತೀರ್ಪಿಗೆ ಪ್ರತಿಕ್ರಯಿಸಬಹುದು. ಆದರೆ ನ್ಯಾಯಾಧೀಶರ ಬಗ್ಗೆ ಟೀಕಿಸಬಾರದು. ಡಿ ಕುನ್ಹಾ ಅವರು ಆಗಸ್ಟ್‌ನಲ್ಲಿ ಮಧ್ಯಂತರ ವರದಿಕೊಟ್ಟಿದ್ದಾರೆ. ಈಗ ಉಪಚುನಾವಣೆ ನಡೆಯುತ್ತಿದೆ. ಅದಕ್ಕೂ ಚುನಾವಣೆಗೂ ಏನು ಸಂಬಂಧ” ಎಂದು ಪ್ರಶ್ನಿಸಿದರು.

“ನ್ಯಾಯಾಧೀಶರನ್ನು ನಿಂದನೆ ಮಾಡುವುದು, ಅವರ ಗೌರವಕ್ಕೆ ಚ್ಯುತಿ ಬರುವ ಹೇಳಿಕೆ ನೀಡುವುದು ಒತ್ತಡ ಹೇರುವ ಕೆಲಸ‌. ಇದು ಆಯೋಗದ ಮೇಲೆ ಭಯ ಹುಟ್ಟಿಸುವ ಕೆಲಸ. ತನಿಖಾ ಹಂತದಲ್ಲಿ ಯಾರೂ ಈ ರೀತಿ ಮಾತನಾಡಬಾರದು. ಇಂತಹ ಅಂಶಗಳನ್ನು ರಾಜ್ಯಪಾಲರಿಗೆ ವಿವರಿಸಿ ಕ್ರಮಕ್ಕೆ ಒತ್ತಾಯಿಸಿದ್ದೇವೆ” ಎಂದು ಹೇಳಿದರು.

ಪ್ರಲ್ಹಾದ್ ಜೋಶಿ ಹೇಳಿದ್ದೇನು?

ಪಿಪಿಇ ಕಿಟ್‌ಗಳ ಖರೀದಿಯ ತನಿಖೆ ನಡೆಸುತ್ತಿರುವ ನ್ಯಾ. ಜಾನ್ ಮೈಕೆಲ್ ಡಿ ಕುನ್ಹಾ ಅವರ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಶಿಗ್ಗಾಂವಿಯಲ್ಲಿ ಮಾತನಾಡುತ್ತಾ “ನೀವು ನ್ಯಾಯಾಧೀಶರು, ಏಜೆಂಟ್ ಅಲ್ಲ” ಎಂದು ಹೇಳಿದ್ದರು.

ನ್ಯಾ.ಜಾನ್ ಮೈಕಲ್ ಡಿ ಕುನ್ಹಾ ಯಾವಾಗಲೂ ನಮ್ಮ ವಿರುದ್ಧವಾಗಿದ್ದಾರೆ. ಚುನಾವಣಾ ಸಮಯದಲ್ಲಿ ಯಾಕೆ ಮಧ್ಯಂತರ ವರದಿ ನೀಡಬೇಕು? ಒಂದೂವರೆ ವರ್ಷದಿಂದ ಕಾಂಗ್ರೆಸ್ ಸರ್ಕಾರ ಏನು ಮಾಡುತ್ತಿದೆ? ಇದು ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯುವ ತಂತ್ರ ಎಂದು ಪ್ರಲ್ಹಾದ್ ಜೋಶಿ ಆರೋಪಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments