Homeಕರ್ನಾಟಕವಿಜಯಪುರ ಕೈಗಾರಿಕೆಯಲ್ಲಿ ಅವಘಡ | ಏಳು ಮೃತ ಕಾರ್ಮಿಕರ ಕುಟುಂಬಕ್ಕೆ ತಲಾ ₹7 ಲಕ್ಷ ಪರಿಹಾರ:...

ವಿಜಯಪುರ ಕೈಗಾರಿಕೆಯಲ್ಲಿ ಅವಘಡ | ಏಳು ಮೃತ ಕಾರ್ಮಿಕರ ಕುಟುಂಬಕ್ಕೆ ತಲಾ ₹7 ಲಕ್ಷ ಪರಿಹಾರ: ಸಚಿವ ಎಂ ಬಿ ಪಾಟೀಲ

ವಿಜಯಪುರ ನಗರದ ಅಲಿಯಾಬಾದ್ ಕೈಗಾರಿಕಾ ಪ್ರದೇಶದ ರಾಜ್ ಗುರು ಫುಡ್‌ನ ಮೆಕ್ಕೆಜೋಳ ತುಂಬಿರುವ ಟ್ಯಾಂಕ್‌ನ ಸರಣಿ ಪಿಲ್ಲರ್‌ಗಳು ಕುಸಿದು ಬಿದ್ದು ಸಾವಿಗೀಡಾದ ಬಿಹಾರದ ಏಳು ಕಾರ್ಮಿಕರ ಕುಟುಂಬಕ್ಕೆ ತಲಾ ₹7 ಲಕ್ಷ ಪರಿಹಾರ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ತಿಳಿಸಿದರು.

ರಾಜಗುರು ಫುಡ್ಸ್‌ನ ಮಾಲೀಕ ಕಿಶೋರ್ ಜೈನ್ ಅವರು ಸಾವಿಗೀಡಾದ ಕಾರ್ಮಿಕರಿಗೆ ತಲಾ ₹5 ಲಕ್ಷ ಪರಿಹಾರ ಕೊಡಲು ಒಪ್ಪಿದ್ದಾರೆ. ರಾಜ್ಯ ಸರ್ಕಾರ ತಲಾ ₹2 ಲಕ್ಷ ಪರಿಹಾರ ನೀಡಲಿದೆ” ಎಂದು ಸುದ್ದಿಗಾರರಿಗೆ ಹೇಳಿದರು.

“ಗಾಯಗೊಂಡಿರುವ ಒಬ್ಬ ಕಾರ್ಮಿಕನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯವಾಗಿದ್ದಾರೆ. ಅವರಿಗೆ ಸಹ ₹50 ಸಾವಿರ ಪರಿಹಾರ ನೀಡಲಾಗುವುದು” ಎಂದರು.

ವಿಮಾನದ ಮೂಲಕ ಮೃತ ದೇಹ ರವಾನೆ

ಕಾರ್ಮಿಕರ ಶವಗಳನ್ನು ಸಮೀಪದ ಬೆಳಗಾವಿ ಅಥವಾ ಕುಲಬುರ್ಗಿ ವಿಮಾನ ನಿಲ್ದಾಣದಿಂದ ಬಿಹಾರ ರಾಜ್ಯದ ರಾಜಧಾನಿ ಪಟ್ನಾಕ್ಕೆ ವಿಮಾನದ ಮೂಲಕ (ಏರ್ ಲಿಫ್ಟ್) ಸಾಗಿಸಿ, ಕಾರ್ಮಿಕರ ಮನೆಗೆ ತಲುಪಿಸಲಾಗುವುದು” ಎಂದು ಇದೇ ವೇಳೆ ತಿಳಿಸಿದರು.

ವಿಜಯಪುರ ತಾಲೂಕಿನ ಅಲಿಯಾಬಾದ್ ಬಳಿ ಇರುವ ಕೈಗಾರಿಕಾ ಪ್ರದೇಶದಲ್ಲಿರುವ ರಾಜಗುರು ಫುಡ್ಸ್ ಕಂಪನಿಯ ಮೆಕ್ಕೆಜೋಳ ಸಂಗ್ರಹಿಸಿಡುತ್ತಿದ್ದ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಫುಡ್ ಪ್ರೊಸೆಸಿಂಗ್ ಯುನಿಟ್ ಯಂತ್ರ ಸಮೇತ 480 ಟನ್ ಮೆಕ್ಕೆಜೋಳದ ಮೂಟೆಗಳು ಬಿದ್ದಿವೆ. ಪರಿಣಾಮ ಎಂಟು ಮಂದಿ ಕಾರ್ಮಿಕರು ಅದರೊಳಗೆ ಸಿಲುಕಿಕೊಂಡು, ಜೀವನ್ಮರಣ ಹೋರಾಟ ನಡೆಸಿದ್ದರು. ಈ ಪೈಕಿ ಏಳು ಮಂದಿ ಶವವಾಗಿ ಪತ್ತೆಯಾಗಿದ್ದಾರೆ.

ಬಿಹಾರ ಮೂಲದ ಗುಲಾರ್​ ಚಂದ್ ​(50), ಕೃಷ್ಣಕುಮಾರ್ ​(22), ರಾಮ್​​ ಬಾಲಕ್​ (52), ಲುಖೋ ಜಾಧವ್(45), ರಾಜೇಶ್ ಮುಖಿಯಾ (25), ರಾಮ್ರೀಜ್ ಮುಖಿಯಾ(29), ಸಂಬೂ ಮುಖಿಯಾ (26) ಮೃತ ಕಾರ್ಮಿಕರು. ಘಟನೆಯಲ್ಲಿ ಕಾರ್ಮಿಕರಾದ ಸೋನು ಕರಾಮಚಂದ್, ರವೀಶ್ ಕುಮಾರ್, ಅನಿಲ್, ಕಲ್ಮೇಶ್ವರ್ ಮುಕಿಯ, ಕಿಶೋರ್ ಹಜಾರಿಮಲ್ ಜೈನ್, ಪ್ರಕಾಶ್ ಧುಮಗೊಂಡ ಎಂಬುವವರು ಗಾಯಗೊಂಡಿದ್ದಾರೆ.

ಬೆಳಗಾವಿ ವಿಧಾನ ಮಂಡಲ ಅಧಿವೇಶನದಲ್ಲಿದ್ದ ಸಚಿವ ಎಂ ಬಿ ಪಾಟೀಲ್ ಸೋಮವಾರ ಸಂಜೆ ನಡೆದ ಈ ಅವಘಡದ ಸುದ್ದಿ ತಿಳಿಯುತ್ತಿದ್ದಂತೆ ತಡರಾತ್ರಿ ವಿಜಯಪುರ ನಗರಕ್ಕೆ ದೌಡಾಯಿಸಿದರು. ಅಲ್ಲದೇ, ಘಟನಾ ಸ್ಥಳಕ್ಕೆ ತೆರಳಿ ಮಧ್ಯರಾತ್ರಿ ಬಹಳ ಹೊತ್ತಿನವರೆಗೂ ರಕ್ಷಣಾ ಕಾರ್ಯಾಚರಣೆ ಪರಿಶೀಲನೆ ನಡೆಸಿದರು.

ಘಟನೆಯಲ್ಲಿ ಒಟ್ಟು 50 ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದರು. ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಎಸ್ ಡಿಆರ್ ಎಫ್, ಎನ್ ಡಿಆರ್ ಎಫ್, ಅಗ್ನಿಶಾಮಕ, ಪೊಲೀಸ್ ಹಾಗೂ ಜಿಲ್ಲಾಡಳಿತಕ್ಕೆ ಸಚಿವರು ಧನ್ಯವಾದ ಸಲ್ಲಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments