ಬಿಜೆಪಿಯವರು ಕರಾವಳಿಯಲ್ಲಿದ್ದ ತಮ್ಮ ಕೋಮುವಾದದ ಪ್ರಯೋಗ ಶಾಲೆಯ ಬ್ರ್ಯಾಂಚ್ನ್ನು ಹಳೆ ಮೈಸೂರು ಭಾಗದಲ್ಲೂ ಓಪನ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಮದ್ದೂರು ಗಲಭೆ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಅವರು, “ಉರಿಗೌಡ ನಂಜೇಗೌಡ ಪಾತ್ರಗಳ ಸೃಷ್ಟಿ,- ಶ್ರೀರಂಗಪಟ್ಟಣದ ಕೋಮು ಸಂಘರ್ಷ, ಕೆರೆಗೋಡು ಧ್ವಜ ಗಲಾಟೆ, ನಾಗಮಂಗಲ ಗಲಾಟೆ, ಮದ್ದೂರು ಗಲಾಟೆ ಘಟನೆಗಳ ಹಿಂದೆ ಬಿಜೆಪಿಯ ರಾಜಕೀಯ ಕಾರ್ಯಸೂಚಿ ಇದೆ. ಕರಾವಳಿಯಲ್ಲಿ ಹಾಕಿದ ವಿಷವನ್ನೇ ಹಳೆ ಮೈಸೂರು ಭಾಗಕ್ಕೂ ಹಾಕಲಾಗುತ್ತಿದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.
“ಬಿಜೆಪಿಯೊಂದಿಗೆ ಜೆಡಿಎಸ್ ಸೈದ್ದಂತಿಕ ಮೈತ್ರಿ ಮಾಡಿಕೊಂಡ ನಂತರ ಕೋಮು ಸಾಮರಸ್ಯಕ್ಕೆ ಹೆಸರಾಗಿದ್ದ ಮಂಡ್ಯ ಸುತ್ತಾ ಮುತ್ತ ಗಲಾಟೆಗಳು ಶುರುವಾಗಿವೆ. ಇದೆಲ್ಲದಕ್ಕೆ ಕಡಿವಾಣ ಹಾಕಲು ನಮ್ಮ ಸರ್ಕಾರ ಶಕ್ತಿಮೀರಿ ಪ್ರಯತ್ನಿಸುತ್ತದೆ. ಸಾಮರಸ್ಯ, ಸಹಬಾಳ್ವೆಯನ್ನು ಸ್ಥಾಪಿಸಲು ಸದಾ ಬದ್ದವಾಗಿದೆ” ಎಂದಿದ್ದಾರೆ.