ಕರಾವಳಿಯಲ್ಲಿ ಕೋಮು ಸಂಘರ್ಷ ತಡೆಯುವ ನಿಟ್ಟಿನಲ್ಲಿ ರಚಿಸಲಾದ ವಿಶೇಷ ಕಾರ್ಯ ಪಡೆಯನ್ನು (ಸ್ಪೆಷಲ್ ಆ್ಯಕ್ಷನ್ ಫೋರ್ಸ್) ಶುಕ್ರವಾರ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಉದ್ಘಾಟಿಸಿದರು.
ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿ ಬಳಿಯ ಗೆಸ್ಟ್ ಹೌಸ್ ಕಟ್ಟಡದಲ್ಲಿ ವಿಶೇಷ ಕಾರ್ಯ ಪಡೆ ಕಚೇರಿ ಕಾರ್ಯಾಚರಣೆ ನಡೆಸಲಿದೆ.
ವಿಶೇಷ ಕಾರ್ಯ ಪಡೆಯ ಉದ್ಘಾಟನೆ ಬಳಿಕ ಮಾತನಾಡಿದ ಗೃಹ ಸಚಿವ ಪರಮೇಶ್ವರ್, “ಆರು ತಿಂಗಳ ಹಿಂದೆ ಮಂಗಳೂರಿನಲ್ಲಿ ಒಂದು ಕೊಲೆಯಾಗಿತ್ತು. ಸ್ವಾಭಾವಿಕವಾಗಿ ಆತಂಕ, ಭಯದ ವಾತಾವರಣ ನಿರ್ಮಾಣವಾಗಿತ್ತು. ಆ ವೇಳೆ ಶಾಂತಿ ಸಹಬಾಳ್ವೆಯ ಪರಿಸ್ಥಿತಿಯನ್ನು ನಾನು ಇಲ್ಲಿ ನೋಡಲೇ ಇಲ್ಲ” ಎಂದರು.
“ಶಾಂತಿ ಕಾಪಾಡುವುದು ವಿಶೇಷ ಕಾರ್ಯಪಡೆಯ ಉದ್ದೇಶ. ಜನ ಅರ್ಥ ಮಾಡಿಕೊಂಡರೆ ಈ ಪಡೆಯ ಅಗತ್ಯತೆ ಕಡಿಮೆಯಾಗುತ್ತದೆ. ಕಾರ್ಯಪಡೆಯನ್ನು ಸಾಂಕೇತಿಕವಾಗಿ ರಚಿಸಲಾಗಿದೆ. ಎಎನ್‌ಎಫ್ (ನಕ್ಸಲ್ ನಿಗ್ರಹ ಪಡೆ) ವಿಸರ್ಜಿಸುವುದಿಲ್ಲ. ಅದರ ಪ್ರಮಾಣ ಕಡಿಮೆ ಮಾಡಿದ್ದೇವೆ. ಸದ್ಯಕ್ಕೆ ಅಗತ್ಯತೆ ಇಲ್ಲದಿದ್ದರೂ ಯಾವುದಾದರೂ ಸಂದರ್ಭದಲ್ಲಿ ಅಗತ್ಯ ಬಂದರೆ ಬೇಕಾಗುತ್ತದೆ ಎಂದು ಇಟ್ಟುಕೊಂಡಿದ್ದೇವೆ” ಎಂದು ಹೇಳಿದರು.
“ಒರಿಸ್ಸಾ, ಅಸ್ಸಾಂ ಮೊದಲಾದೆಡೆ ನಕ್ಸಲ್ ಚಟುವಟಿಕೆ ಇದೆ. ಅಲ್ಲಿಂದ ಇಲ್ಲಿಗೆ ಬರುವ ಸಾಧ್ಯತೆಯೂ ಇದೆ. ಅದು ಬಂದರೆ ತಯಾರಿರಬೇಕೆಂದು ನಕ್ಸಲ್ ನಿಗ್ರಹ ಪಡೆಯ ಸ್ವಲ್ಪ ಭಾಗವನ್ನು ಹಾಗೆಯೇ ಇಟ್ಟುಕೊಂಡಿದ್ದೇವೆ” ಎಂದರು.
“ಕರಾವಳಿಯಲ್ಲಿ ಎಲ್ಲೋ ಒಂದು ಕಡೆ ದ್ವೇಷ ಹೆಚ್ಚಾಗುತ್ತಿದೆ. ಇದನ್ನು ಆದಷ್ಟು ಶೀಘ್ರವಾಗಿ ಹತ್ತಿಕ್ಕದೆ ಇದ್ದರೆ ಇದು ಬೇರೆ ಬೇರೆ ಭಾಗಕ್ಕೂ ಹೋಗುವ ಸಾಧ್ಯತೆಯಿದೆ. ನಾನು ಈ ಹಿಂದೆಯೇ ಒಂದು ಟಾಸ್ಕ್ ಫೋರ್ಸ್ ಮಾಡಲು ಆಗಿನ ಕಮೀಷನರ್ ಗೆ ಹೇಳಿದ್ದೆ. ಅವತ್ತು ಸಣ್ಣದೊಂದು ಫೋರ್ಸ್ ಮಾಡಿದ್ದರೂ ಅಷ್ಟು ಪ್ರಯೋಜನಕಾರಿಯಾಗಿಲ್ಲ. ಮೊನ್ನೆ ನಡೆದಂತಹ ಮೂರು ಕೊಲೆಗಳನ್ನು ಗಮನಿಸಿದಾಗ ಒಂದು ವಿಶೇಷ ಪಡೆಯನ್ನೇ ಮಾಡಬೇಕು ಎಂದು ನನಗೆ ಅನ್ನಿಸಿತ್ತು. ಇದಕ್ಕೆ ಒಂದು ಕಠಿಣವಾದ ತೀರ್ಮಾನ ಆಗಬೇಕು, ಕಠಿಣವಾದ ಕ್ರಮ ಆಗಬೇಕು ಅಂದುಕೊಂಡೆ. ಇದಕ್ಕಾಗಿಯೇ ನಾನು ಅವತ್ತೇ ಘೋಷಣೆ ಮಾಡಿ ಹೋದೆ. ಒಂದು ವಾರದಲ್ಲೇ ಅದಕ್ಕೊಂದು ರೂಪುರೇಷೆ ಮಾಡಿದ್ದೇವೆ” ಎಂದು ತಿಳಿಸಿದರು.
“ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ಈ ಫೋರ್ಸ್ ಕಾರ್ಯಾಚರಣೆ ಮಾಡಲಿದೆ. ಡಿಐಜಿ ದರ್ಜೆ ಅಧಿಕಾರಿ ನೇತೃತ್ವದಲ್ಲಿ ಈ ತಂಡ ಕಾರ್ಯ ನಿರ್ವಹಿಸಲಿದ್ದು, 248 ಸಿಬ್ಬಂದಿ ಒಳಗೊಂಡ ಮೂರು ಕಂಪನಿ ಕಾರ್ಯಾಚರಣೆಗೆ ಸಿದ್ಧವಾಗಿದೆ. ಪ್ರತಿ ಕಂಪನಿಯಲ್ಲಿ 80 ಸಿಬ್ಬಂದಿ ಇರಲಿದ್ದಾರೆ” ಎಂದು ಹೇಳಿದರು.
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್‌ಐಎಗೆ ವಹಿಸಿರುವ ಬಗ್ಗೆ ಪ್ರತಿಕ್ರಿಯಿಸಿ, “ಕೇಂದ್ರಕ್ಕೆ ಅದನ್ನು ಎನ್‌ಐಎಗೆ ಪಡೆಯುವ ಅಧಿಕಾರವಿದೆ. ಅವರು ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಅವರಿಗೆ ಕೊಡಲೇಬೇಕಾದ ಪರಿಸ್ಥಿತಿ ಬಂದಿದೆ. ಯಾಕೆ ನಿರ್ದಿಷ್ಟವಾಗಿ ಆ ಕೇಸು ಎನ್‌ಐಎಗೆ ಕೇಳಿದ್ದಾರೆಂದು ಗೊತ್ತಿಲ್ಲ” ಎಂದರು.
ರೆಹಮಾನ್ ಹತ್ಯೆ ಪ್ರಕರಣವನ್ನು ಎನ್‌ಐಎಗೆ ನೀಡುತ್ತೀರಾ ಎಂದು ಕೇಳಿದಾಗ, “ಅದನ್ನು ಎನ್‌ಐಎಗೆ ಕೇಳಿಲ್ಲ. ನಮ್ಮ ಪೊಲೀಸರು ತನಿಖೆ ನಡೆಸಲು ಸಮರ್ಥರಿದ್ದಾರೆ. ತನಿಖೆ ನಡೆಯುತ್ತಿದೆ. ಅಗತ್ಯತೆ ಬಿದ್ದರೆ ಹೆಚ್ಚು ತೀವ್ರವಾಗಿ ಮಾಡುತ್ತೇವೆ. ರೆಹಮಾನ್ ಮತ್ತು ಅಶ್ರಫ್ ಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆ ಒಂದು ವಾರ, ತಿಂಗಳಲ್ಲಿ ಮುಗಿಯುವುದಿಲ್ಲ. ಅದರ ಬುಡಕ್ಕೆ ಹೋಗಬೇಕಾದರೆ ಸಮಗ್ರ ತನಿಖೆಯಾಗಬೇಕು. ಅದನ್ನು ಮಾಡುತ್ತಿದ್ದೇವೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ತಿಳಿಯಲು ತನಿಖೆ ನಡೆಯಲಿದೆ. ಯಾವ ಉದ್ದೇಶಕ್ಕೆ ಕೊಲೆಯಾಗಿದೆ, ವೈಯಕ್ತಿಕವೇ, ಕೋಮುದ್ವೇಷವೇ ಎಂದು ಈಗ ಹೇಳಲಾಗದು. ತನಿಖೆಯ ವರದಿ ಬಂದ ಅನಂತರ ಗೊತ್ತಾಗಲಿದೆ” ಎಂದು ಹೇಳಿದರು.
ಜಾತಿ ಗಣತಿಯ ಮರುಸರ್ವೆ ಕುರಿತು ಮಾತನಾಡಿದ ಪರಮೇಶ್ವರ್, “ಈಗ ನಡೆಸಲಾಗಿರುವ ಸಮೀಕ್ಷೆ ಬಗ್ಗೆ ಕೆಲವು ಸಮುದಾಯಗಳು ಸರಕಾರದ ವಿರುದ್ಧವಾಗಿ ಮಾತನಾಡಿದರು. ಹೈಕಮಾಂಡ್‌ನವರು ಕೂಡ ಸರಿಯಾಗಿ ಮಾಡಲು ಸೂಚಿಸಿದ್ದಾರೆ. ಅಲ್ಲದೆ 10 ವರ್ಷದ ಹಿಂದಿನ ಜನಸಂಖ್ಯೆಯ ಮಾಹಿತಿಯನ್ನು ಆಧರಿಸಲಾಗಿತ್ತು. ಅನಂತರ ಹೆಚ್ಚಾದ ಜನಸಂಖ್ಯೆಯ ಉಲ್ಲೇಖವಿರಲಿಲ್ಲ. ಹಾಗಾಗಿ ಪುನರ್‌ಸರ್ವೆಗೆ ತೀರ್ಮಾನ ತೆಗೆದುಕೊಂಡಿದ್ದೇವೆ” ಎಂದರು.
ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನಪರಿಷತ್ ಸದಸ್ಯರಾದ ಐವನ್ ಡಿ’ಸೊಜಾ ಮಂಜುನಾಥ ಭಂಡಾರಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ. ಎಂ.ಎ. ಸಲೀಂ, ಎಡಿಜಿಪಿ ಮುರುಗನ್, ಐಜಿಪಿ ಅಮಿತ್ ಸಿಂಗ್, ಜಿಲ್ಲಾಧಿಕಾರಿ ಮುಲೈ ಮುಗಿಲನ್, ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಅರುಣ್ ಕೆ, ಉಡುಪಿ ಎಸ್ ಪಿ ಹರಿರಾಮ್ ಶಂಕರ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಇದ್ದರು.