ಶಿಗ್ಗಾಂವಿ ಕ್ಷೇತ್ರದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸಲ್ಲಿಸಿರುವ ನಾಮಪತ್ರ ವಾಪಸ್ ಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಅವರ ಮನವೊಲಿಸಿದ್ದಾರೆ.
ಶಿಗ್ಗಾಂವಿ ಉಪ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಅಜ್ಜಂ ಪೀರ್ ಖಾದ್ರಿ ಅವರನ್ನು ಸಚಿವ ಜಮೀರ್ ಅಹಮದ್ ಖಾನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಕರೆದುಕೊಂಡು ಬಂದು ಚರ್ಚಿಸಿದರು.
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಕೊನೆಯ ದಿನ ಕಾಂಗ್ರೆಸ್ ಒಳಗೆ ಬಂಡಾಯ ಭುಗಿಲೆದ್ದಿತ್ತು. ಕಾಂಗ್ರೆಸ್‌ನ ಮಾಜಿ ಶಾಸಕ ಸೈಯದ್ ಅಜ್ಜಂಪೀರ್ ಖಾದ್ರಿ ಮತ್ತು ಮಾಜಿ ಶಾಸಕ ಮಂಜುನಾಥ್ ಕುನ್ನೂರು ಬಂಡಾಯ ಸಾರಿ ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನವೊಲಿಕೆಯಿಂದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಅವರು ನಾಮಪತ್ರ ವಾಪಸ್ ಪಡೆಯುವುದು ಪಕ್ಕಾ ಆಗಿದೆ. ಮಂಜುನಾಥ್ ಕುನ್ನೂರು ಅವರ ನಾಮಪತ್ರ ವಾಪಸ್ ಪಡೆಯುತ್ತಾರಾ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.