ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಮತ್ತಿತರರಿಗೆ ರಾಜಾತಿಥ್ಯ ಒದಗಿಸುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಸೂಚಿಸಿದ್ದಾರೆ.
ದರ್ಶನ್ ಮತ್ತು ಇತರರನ್ನು ಕೂಡಲೇ ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡುವಂತೆ ಸಿಎಂ ತಾಕೀತು ಮಾಡಿದ್ದಾರೆ. ಕಾರಾಗೃಹಕ್ಕೆ ಭೇಟಿ ನೀಡಿ ಪ್ರಕರಣದ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಸಿಎಂ ಅವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
ಏನಿದು ಘಟನೆ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿ ಜೈಲಿನಲ್ಲಿರುವ ನಟ ದರ್ಶನ್ಗೆ ರಾಜಾತಿಥ್ಯ ದೊರೆಯುತ್ತಿರುವ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ನಟ ದರ್ಶನ್ ಜೈಲಿನಲ್ಲಿ ಕುಳಿತು ಸಿಗರೇಟ್ ಸೇದುತ್ತಾ, ಕಾಫಿ ಕುಡಿಯುತ್ತಿರುವ ಫೋಟೋ ವೈರಲ್ ಆಗಿತ್ತು. ಇದರ ಜೊತೆಗೆ ದರ್ಶನ್ ಅವರು ವಿಡಿಯೋ ಕಾಲ್ ಮಾಡಿ ಮಾತನಾಡಿರುವುದು ಬಯಲಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಮುಂದಾಗಿದೆ.
ಪ್ರಕರಣದ ಸಂಬಂಧಿಸಿದಂತೆ ಬೆಂಗಳೂರು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, “ದರ್ಶನ್ ರಾಜಾತಿಥ್ಯದ ಸಂಬಂಧ ಜೈಲಿನ ಏಳು ಅಧಿಕಾರಿಗಳನ್ನು ಅವರು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ. ಘಟನೆಯ ವರದಿಯನ್ನು ಕೇಳಿದ್ದೇವೆ. ಈ ರೀತಿಯ ಘಟನೆ ನಡೆಯಬಾರದು. ಕೆಲವರನ್ನು ಸಸ್ಪೆಂಡ್ ಮಾಡಿದ್ದು, ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಮೇಲಧಿಕಾರಿಗಳನ್ನು ವರ್ಗಾವಣೆ ಮಾಡಲಾಗುವುದಯ. ಪದೇ ಪದೆ ಈ ರೀತಿ ಆಗಬಾರದು. ರಾಜ್ಯದ ಎಲ್ಲ ಬಂಧಿಖಾನೆಗಳಲ್ಲಿ ಸಿಸಿಟಿವಿ ಹಾಕುತ್ತಿದ್ದೇವೆ. ಜಾಮರ್ ಹಾಕಲಾಗುತ್ತಿದೆ. ಆದಾಗ್ಯೂ ಈ ರೀತಿಯ ಘಟನೆ ನಡೆಯುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಜಾಮರ್ ನಿಂದ ತೊಂದರೆ
“ಮೇಲಧಿಕಾರಿಗಳು ಈ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದರೆ ಅವರನ್ನು ತೆಗೆದು ಹಾಕುತ್ತೇವೆ. ವರದಿ ಬಂದ ನಂತರ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ದರ್ಶನ್ಗೆ ಚಿಕನ್ ಬಿರಿಯಾನಿ ಕೊಟ್ಟಿಲ್ಲ. ಜೈಲಿನ ನಿಯಮದಂತೆ ಊಟ ಕೊಡಲಾಗುತ್ತಿದೆ. ಈಗ ನಡೆದ ಘಟನೆ ಸಮರ್ಥಿಸಿಕೊಳ್ಳುತ್ತಿಲ್ಲ” ಎಂದರು.
“ಜೈಲಿನಲ್ಲಿ ಜಾಮರ್ ಹಾಕಿ ಅದರ ಸಾಮಾರ್ಥ್ಯ ಹೆಚ್ಚಿಸಲಾಗಿತ್ತು. ಇದರಿಂದ ಪಕ್ಕದ ಏರಿಯಾಗಳಿಗೆ ತೊಂದರೆ ಆಗಿತ್ತು. ಹೀಗಾಗಿ, ಸದ್ಯ ಪ್ರೀಕ್ವೆನ್ಸಿ ಕಡಿಮೆ ಮಾಡಲಾಗಿದೆ. ಫೋಟೋ ಯಾರು ತೆಗೆದರು? ಯಾರ ಮೊಬೈಲ್ನಲ್ಲಿ ತೆಗದಿದ್ದಾರೆ ಎನ್ನುವುದು ಮುಖ್ಯ ಆಗಲಿದೆ” ಎಂದು ಹೇಳಿದರು.
ತನಿಖೆಗೆ ಸೂಚನೆ
ದರ್ಶನ್ಗೆ ರಾಜಾತಿಥ್ಯ ದೊರೆಯುತ್ತಿರುವ ಫೋಟೋ ಹಾಗೂ ವಿಡಿಯೋ ಬಹಿರಂಗಗೊಂಡ ಬೆನ್ನಲ್ಲೇ ಆಂತರಿಕ ತನಿಖೆ ನಡೆಸಿ ವರದಿ ನೀಡುವಂತೆ ಗೃಹ ಸಚಿವ ಪರಮೇಶ್ವರ್ ಸೂಚನೆ ನೀಡಿದ್ದಾರೆ. ಬಂದೀಖಾನೆಯ ಪೊಲೀಸ್ ಮಹಾನಿರ್ದೇಶಕರಾದ (ಡಿಜಿ) ಮಾಲಿನಿ ಕೃಷ್ಣಮೂರ್ತಿ ಅವರಿಗೆ ಕರೆ ಮಾಡಿರುವ ಗೃಹ ಸಚಿವ ಪರಮೇಶ್ವರ್, ವಿಡಿಯೋ ವೈರಲ್ ಆಗಿರುವ ಸಂಬಂಧಿಸಿದಂತೆ ಪೂರ್ಣ ಮಾಹಿತಿ ಪಡೆದರು.
ದರ್ಶನ್ಗೆ ರಾಜಾತಿಥ್ಯ ನೀಡಲಾಗಿದೆಯೇ, ವಿಡಿಯೋ ಕಾಲ್ನಲ್ಲಿ ಕಾಣಿಸಿಕೊಳ್ಳಲು ಹೇಗೆ ಸಾಧ್ಯವಾಯಿತು, ಫೋಟೋ ಹೊರಬೀಳಲು ಏನು ಕಾರಣ ಇತ್ಯಾದಿ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಗೃಹ ಸಚಿವರು ಸೂಚನೆ ನೀಡಿದ್ದಾರೆ.
ವಿಡಿಯೋ ಕಾಲ್ ವ್ಯವಸ್ಥೆ
ಜೈಲಿನಲ್ಲಿರುವ ನಟ ದರ್ಶನ್ ರೌಡಿಶೀಟರ್ ಜೊತೆ ಆರಾಮಾಗಿ ಕುಳಿತು ಕಾಫಿ- ಟೀ ಕುಡಿಯುತ್ತಿರುವ ಹಾಗೂ ವಿಡಿಯೋ ಕಾಲ್ನಲ್ಲಿ ಕಾಣಿಸಿಕೊಂಡ ಫೋಟೋ- ವಿಡಿಯೋ ನಿನ್ನೆ ವೈರಲ್ ಆಗಿತ್ತು. ದರ್ಶನ್ಗೆ ಐಷಾರಾಮಿ ಸೌಲಭ್ಯಗಳನ್ನು ನೀಡಲಾಗಿದೆ, ಕಾಫಿ-ಟೀ ಜೊತೆ ಸಿಗರೇಟ್ ಕೂಡ ಸರಬರಾಜು ಮಾಡಿದ್ದಾರೆ. ಅವರಿಗೆ ವಿಡಿಯೋ ಕಾಲ್ ವ್ಯವಸ್ಥೆ ಕೂಡ ಮಾಡಿಕೊಡಲಾಗಿದೆ ಎಂಬ ಅನುಮಾನ ಜನರಲ್ಲಿ ಮೂಡಿದೆ.