ಕೋಲಾರ, ಬಂಗಾರಪೇಟೆ ಮಾಲೂರು ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಯರಗೋಳ್ ಅಣೆಕಟ್ಟು ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಉದ್ಘಾಟಿಸಿದರು.
ಕೋಲಾರ ಜಿಲ್ಲಾಡಳಿತ ಹಾಗೂ ನಗರಾಭಿವೃದ್ಧಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲೆಯ ಒಟ್ಟು 2197.72 ಕೋಟಿ ರೂ.ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದರು.
ಕೋಲಾರ ತಾಲ್ಲೂಕಿನ ಬಲಮಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ಕುಡಿಯುವ ನೀರಿಗೆ ಮೀಸಲಾದ ಜಿಲ್ಲೆಯ ಏಕೈಕ ಯೋಜನೆ ಇದಾಗಿದೆ. ಯರಗೋಳ ಗ್ರಾಮದ ಬಳಿ ಈ ಅಣೆಕಟ್ಟು ನಿರ್ಮಿಸಲಾಗಿದೆ. ಮಾರ್ಕಂಡೇಯ ಜಲಾಶಯದಿಂದ ತಮಿಳುನಾಡಿಗೆ ವ್ಯರ್ಥವಾಗಿ ಹೋಗುತ್ತಿದ್ದ ನೀರು ತಡೆಗಟ್ಟಲು ಈ ಯೋಜನೆ ಜಾರಿ ಮಾಡಲಾಗಿದೆ.
ಸಚಿವರಾದ ಡಾ: ಹೆಚ್.ಸಿ.ಮಹದೇವಪ್ಪ, ಕೆ.ಹೆಚ್.ಮುನಿಯಪ್ಪ, ಶಾಸಕರು ಹಾಗೂ ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಶಾಸಕರಾದ ಕೆ.ವೈ.ನಂಜೇಗೌಡ ಹಾಗೂ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಸಂಸದ ಉಪಸ್ಥಿತರಿದ್ದರು.