Homeಕರ್ನಾಟಕಖಾಲಿ ಖಜಾನೆಯಲ್ಲಿ ಚಿಲ್ಲರೆ ಹಣ ಎಣಿಸುತ್ತಿರುವ ಸಿಎಂ ಸಿದ್ದರಾಮಯ್ಯ: ಆರ್‌ ಅಶೋಕ್‌ ಟೀಕೆ

ಖಾಲಿ ಖಜಾನೆಯಲ್ಲಿ ಚಿಲ್ಲರೆ ಹಣ ಎಣಿಸುತ್ತಿರುವ ಸಿಎಂ ಸಿದ್ದರಾಮಯ್ಯ: ಆರ್‌ ಅಶೋಕ್‌ ಟೀಕೆ

ರೈತ ವಿರೋಧಿ, ಕಣ್ಣು, ಕಿವಿ, ಹೃದಯ ಇಲ್ಲದ ಕಾಂಗ್ರೆಸ್ ಸರ್ಕಾರ ನರೇಗಾ ಹಣ, ಪಿಂಚಣಿ ಹಣವನ್ನೂ ರೈತರ ಸಾಲಕ್ಕೆ ಜಮೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ರೈತರ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಬ್ಯಾಂಕ್ ಗಳಿಗೆ ಸೂಚಿಸಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿ, “ಕೇಂದ್ರ ಸರ್ಕಾರ ಕರ್ನಾಟಕದ ರೈತರಿಗಾಗಿ 3,454 ಕೋಟಿ ರೂ. ಬರ ಪರಿಹಾರ ಬಿಡುಗಡೆಗೊಳಿಸಿದೆ. ಆದರೆ ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ತನ್ನ ಪಾಲಿನ ಹಣವನ್ನು ನೀಡಿಲ್ಲ” ಎಂದರು.

“ಕೇಂದ್ರ ಸರ್ಕಾರ ನೀಡಿದ ಹಣವನ್ನು ಕೂಡ ರೈತರಿಗೆ ಸರಿಯಾಗಿ ತಲುಪಿಸಿಲ್ಲ. ಈ ಪರಿಹಾರದ ಹಣವನ್ನು ಹಳೆ ಬಾಕಿಗಳಿಗೆ ಬ್ಯಾಂಕುಗಳು ಜಮೆ ಮಾಡುತ್ತಿದ್ದರೂ ರಾಜ್ಯ ಸರ್ಕಾರ ತಕ್ಷಣದ ಕ್ರಮ ವಹಿಸದೆ ಕೈ ಕಟ್ಟಿ ಕುಳಿತಿತ್ತು. ಈಗ ಪಿಂಚಣಿ, ನರೇಗಾ ಹಣವೂ ರೈತರ ಕೈ ಸೇರುವಂತೆ ನೋಡಿಕೊಳ್ಳಲು ಸರ್ಕಾರ ವಿಫಲವಾಗಿದೆ. ಈ ಮೂಲಕ ಅನ್ನದಾತರ ಹೊಟ್ಟೆಗೆ ಹೊಡೆಯುವ ಪಾಪದ ಕೆಲಸ ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಕೂಡಲೇ ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ರೈತರ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸೂಚನೆ ನೀಡಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಬೇಕು‌. ಬ್ಯಾಂಕ್ ಗಳು ಒಪ್ಪದಿದ್ದರೆ ರೈತರ ಸಾಲ ಮನ್ನಾ ಮಾಡಬೇಕು” ಎಂದು ಒತ್ತಾಯಿಸಿದರು.

“ಹಿಂದಿನ ಬಿಜೆಪಿ ಸರ್ಕಾರ ಪ್ರವಾಹ ವಿಕೋಪದಿಂದ ಹಾನಿಗೊಳಗಾದವರಿಗೆ ದುಪ್ಪಟ್ಟು ಪರಿಹಾರ ನೀಡಿತ್ತು. ಕೇಂದ್ರ ಸರ್ಕಾರದ ಜೊತೆಗೆ ರಾಜ್ಯದ ಪಾಲನ್ನೂ ನೀಡಲಾಗಿತ್ತು. ಈಗ ಪಾಪರ್ ಆಗಿ ಖಾಲಿ ಖಜಾನೆಯಲ್ಲಿ ಚಿಲ್ಲರೆ ಎಷ್ಟು ಉಳಿದಿದೆ ಎಂದು ಎಣಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಸಂಕಷ್ಟಕ್ಕೂ ಮಿಡಿಯದೆ ಸುಮ್ಮನಿದ್ದಾರೆ” ಎಂದು ಟೀಕಿಸಿದರು.

ಸಹಾಯಧನ ಘೋಷಿಸಿ

“ಕಳೆದ ವರ್ಷ ಹಿಂಗಾರು, ಮುಂಗಾರು ಎರಡೂ ಕೈ ಕೊಟ್ಟಿದ್ದರಿಂದ ಈ ವರ್ಷ ರೈತರ ಬಳಿ ಬಿತ್ತನೆ ಬೀಜ, ರಸಗೊಬ್ಬರ ಕೊಳ್ಳಲು, ಉಳುಮೆ ಮಾಡಲೂ ಸಹ ಹಣವಿಲ್ಲದ ಪರಿಸ್ಥಿತಿ ಇದೆ. ಆದ್ದರಿಂದ ಈ ಕೂಡಲೇ ಎಕರೆಗೆ 5,000 ರೂ. ನಂತೆ ರೈತರಿಗೆ ವಿಶೇಷ ಸಹಾಯಧನ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಈ ಬಾರಿಯೂ ಕೃಷಿ ಬೆಳೆಗಳು ಕೈ ಕೊಟ್ಟು ಆಹಾರ ಪದಾರ್ಥಗಳ ಕೊರತೆಯಿಂದ ಹಣದುಬ್ಬರ ಉಂಟಾಗಿ ತೀವ್ರ ಬೆಲೆ ಏರಿಕೆ ಆಗುವುದು ನಿಶ್ಚಿತ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ರೈತರ ಸಮಸ್ಯೆಗಳಿಗೆ ಸ್ಪಂದಿಸಿ ನಾಡಿನ ಕೃಷಿ ಚಟುವಟಿಕೆ ಉಳಿಸಬೇಕು” ಎಂದು ಆಗ್ರಹಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments