ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನ ಸ್ಪಂದನೆ ಕಾರ್ಯಕ್ರಮಕ್ಕೆ ಅಹವಾಲು ಹಿಡಿದು ಸಾವಿರಾರು ಜನ ಧಾವಿಸಿದ್ದಾರೆ. ಅಹವಾಲು ಸ್ವೀಕರಿಸುತ್ತಿರುವ ಸಿದ್ದರಾಮಯ್ಯ ಅವರು ಸ್ಥಳದಲ್ಲೇ ಪರಿಹಾರ ಕೂಡ ಸೂಚಿಸುತ್ತಿದ್ದಾರೆ.
ಅಂಜಲಿ ಕುಂಬಾರ ಎಂಬವರ ಆರು ತಿಂಗಳ ಮಗು ಮೇಘಾಶ್ರೀ ಎರಡು ಕಾಲುಗಳ ಅಂಗವೈಕಲ್ಯ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಹೃದಯದಲ್ಲಿ ರಂಧ್ರ ಇದ್ದು ಚಿಕಿತ್ಸೆಗೆ ನೆರವು ನೀಡುವಂತೆ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಯವರು ಸ್ಥಳದಲ್ಲೇ 2 ಲಕ್ಷ ರೂ. ಮಂಜೂರು ಮಾಡಿದರು.
ಬಸವರಾಜು ಅವರು, ಕಿಡ್ನಿ ಕಾಯಿಲೆಯಿಂದ ಬಳಲುತ್ತಿರುವ ತಮ್ಮ ಸಹೋದರ ವೆಂಕಟರಾಜ್ ಎಂಬವವರ ನೆರವಿಗೆ ಬರುವಂತೆ ಮನವಿ ಮಾಡಿದರು. ಸಿಎಂ ಅವರು, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸ್ಥಳದಲ್ಲಿಯೇ ಒಂದು ಲಕ್ಷ ರೂ. ನೆರವು ಮಂಜೂರು ಮಾಡಿದರು.
ವೃದ್ದಾಪ್ಯ ವೇತನ ಮಂಜೂರಾತಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎನ್ನುವ ದೂರುಗಳ ಹಿನ್ನೆಲೆಯಲ್ಲಿ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಇಲಾಖೆ ನಿರ್ದೇಶಕರನ್ನು ಕರೆಸಿ ತಾಂತ್ರಿಕ ತೊಂದರೆ ಇದ್ದರೆ ತಕ್ಷಣ ಬಗೆಹರಿಸಿ ಸಿಬ್ಬಂದಿಯಿಂದ ತೊಂದರೆ ಆಗುತ್ತಿದ್ದರೆ ಅವರ ಮೇಲೆ ಕ್ರಮ ಜರುಗಿಸಿ ಎಂದು ಸಿಎಂ ಸೂಚಿಸಿದರು.
ಮನೆ ಕಂದಾಯ ಕಟ್ಟಿದ್ದರೂ ದುಪ್ಪಟ್ಟು ಪೆನಾಲ್ಟಿ ಹಾಕಿದ್ದಾರೆ. ಕಂದಾಯ ಕಟ್ಟಿದ ರಶೀದಿ ಇಟ್ಟುಕೊಂಡು BBMP ಗೆ ಹೋದರೆ *ನಮಗೆ ಗೊತ್ತಿಲ್ಲ ಹೋಗಿ ಸರ್ಕಾರಕ್ಕೆ ಕೇಳಿ ಎಂದು ಸಿಬ್ಬಂದಿ ದರ್ಪದಿಂದ ನಡೆದುಕೊಳ್ಳುತ್ತಾರೆ ಎಂದು ವೃದ್ದೆಯೊಬ್ಬರ ದೂರಿಗೆ ಗರಂ ಆದ ಮುಖ್ಯಮಂತ್ರಿಗಳು ಬಿಬಿಎಂಪಿ ಅಧಿಕಾರಿಯನ್ನು ಕರೆದು ಸದರಿ ಪ್ರಕರಣವನ್ನು ಖುದ್ದಾಗಿ ಗಮನಿಸಿ ಸಂಜೆಯೊಳಗೆ ಪರಿಹಾರ ಒದಗಿಸಿ ನನಗೆ ರಿಪೋರ್ಟ್ ಮಾಡಿ ಎಂದು ಸೂಚಿಸಿದರು.
ವಿಶೇಷ ಚೇತನರಿಂದ ಮೂರು ಚಕ್ರ ವಾಹನಕ್ಕೆ ಬೇಡಿಕೆ. ಸಿಡಾಕ್ ಸಂಸ್ಥೆಯಿಂದ ತರಬೇತಿ ಪಡೆದಿದ್ದರೂ ಎರಡು ವರ್ಷದಿಂದ ನೆರವು ನೀಡಿಲ್ಲ ಎನ್ನುವ ದೂರು. ತರಬೇತಿ ಪಡೆದಿರುವ 98 ಮಂದಿಗೆ ಮುಂದಿನ 15 ದಿನಗಳ ಒಳಗೆ ಸಾಲ ಸೌಲಭ್ಯ ಒದಗಿಸಬೇಕು. ಉಳಿದವರಿಗೆ ತ್ರಿಚಕ್ರ ವಾಹನ ಕೊಡುಸಲಯ ತಕ್ಷಣ ಕ್ರಮ ಕೈಗೊಳ್ಳಬೇಕು ಎನ್ನುವ ಖಡಕ್ ಸೂಚನೆಯನ್ನು ಮುಖ್ಯಮಂತ್ರಿಗಳು ಬಿಬಿಎಂಪಿ ಆಯುಕ್ತ ತುಷಾರ ಗಿರಿನಾಥ್ ಅವರಿಗೆ ನೀಡಿದರು.
ಹುಣಸೂರಿನ ಕಲ್ಲಹಳ್ಳಿ ಪಂಚಾಯ್ತಿಯ ಲಕ್ಷ್ಮೀಬಾಯಿ ಎನ್ನುವವರು ಅಲೆಮಾರಿ ಡೋಂಗ್ರಿ ಗೆರೆಸಿಯಾ ಸಮುದಾಯದವರಿಗೆ 40 ಮನೆಗಳು ಮಂಜೂರಾಗಿವೆ. ಇವರಿಗೆ ಮನೆ ಕಟ್ಟಲು ಮಂಜೂರಾತಿ ನೀಡುವಂತೆ ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಸಿಎಂ ಅಲೆಮಾರಿ ಅಭಿವೃದ್ಧಿ ನಿಗಮದ ಎಂಡಿ ಅವರನ್ನು ಕರೆದು, ಅರ್ಜಿಯನ್ನು ಸಮಗ್ರವಾಗಿ ಪರಿಶೀಲಿಸಿ ಅಗತ್ಯ ಕ್ರಮ ವಹಿಸಿ ತಮಗೆ ವರದಿ ನೀಡಬೇಕು ಎಂದು ಸೂಚಿಸಿದರು.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ನಸೀಮಾ.ಬಾನು ಅವರು ಜಿಲ್ಲಾ ಪಂಚಾಯಿತಿ ತಮ್ಮ ಮನೆಯನ್ನು ಅಕ್ರಮವಾಗಿ ಪ್ರವೇಶ ಮಾಡಿರುವ ಬಗ್ಗೆ ದೂರು ಸಲ್ಲಿಸಿದರು. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಡಿ.ಪಿ.ಭಾಗ್ಯ ಅವರ ಮನೆ ಶೇ 60 % ಹಾನಿಯಾಗಿದ್ದು ಶೇ 100 ರ ಪರಿಹಾರ ಒದಗಿಸಿಕೊಡುವಂತೆ ಮನವಿ ಸಲ್ಲಿಸಿದರು. ಈ ಮನವಿಗಳನ್ನು ಆದ್ಯತೆ ಮೇಲೆ ಪರಿಗಣಿಸಿ ಸಮಸ್ಯೆಯನ್ನು ಪರಿಶೀಲಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದರು.
ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಮಹದೇವಮ್ಮ ಅವರಿಗೆ ಮಗ ಆಸ್ತಿಯಲ್ಲಿ ಪಾಲು ಕೊಡದೇ ಮೋಸ ಮಾಡಿದ್ದಾನೆ, ವಿಭಾಗ ಪತ್ರವನ್ನು ಕೊಡಿಸಿ ರಕ್ಷಣೆ ನೀಡುವಂತೆ ಮನವಿ ಮಾಡಿದರು. ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಕರೆ ಮಾಡಿದ ಸಿಎಂ ಮಹದೇವಪ್ಪ ಅವರಿಗೆ ನ್ಯಾಯ ಕೊಡಿಸುವಂತೆ ಸೂಚಿಸಿದರು.
ರಾಣೆಬೆನ್ನೂರಿನ ಜೀವ ಬೆಳಕು ಅಂಧ ಮಕ್ಕಳ ಶಾಲೆಗೆ ಸಿ.ಎ. ನಿವೇಶನ ಮಂಜೂರಾಗಿದ್ದು, ಇದಕ್ಕಾಗಿ 9 ಲಕ್ಷ ರೂ. ಪಾವತಿಸುವಂತೆ ಸೂಚಿಸಿದ್ದಾರೆ. ಇದನ್ನು ಪಾವತಿಸಲು ಶಕ್ತರಿಲ್ಲದ ಕಾರಣ ಹಣ ಪಾವತಿಯಿಂದ ವಿನಾಯಿತಿ ನೀಡುವಂತೆ ಮನವಿ ಮಾಡಿದರು. ಆನ್ ಲೈನ್ ಮೂಲಕ ಹಾವೇರಿ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದ ಸಿಎಂ, ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಯವರು ಸೂಚಿಸಿದರು.
ರಾಮನಗರ ಜಿಲ್ಲೆಯ ರಾಜಮ್ಮ ಎಂಬ ವೃದ್ಧೆ ತಮ್ಮ ಜಮೀನನ್ನು ಮೈದುನ ಒತ್ತುವರಿ ಮಾಡಿಕೊಂಡಿದ್ದು, ಬಾವಿಯನ್ನೂ ಮುಚ್ಚಿರುತ್ತಾರೆ. ತಮಗೆ ಗಂಡು ಮಕ್ಕಳಿಲ್ಲ; ಹೆಣ್ಣು ಮಕ್ಕಳು ಮದುವೆಯಾಗಿ, ಗಂಡನ ಮನೆಯಲ್ಲಿದ್ದಾರೆ. ಒಬ್ಬರೇ ಇರುವ ತನಗೆ ಜಮೀನು ಬಿಡಿಸಿಕೊಡುವಂತೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದರು. ರಾಮನಗರ ಜಿಲ್ಲಾಧಿಕಾರಿಗಳಿಗೆ ಆನ್ ಲೈನ್ ಮೂಲಕ ಸಂಪರ್ಕಿಸಿದ ಸಿಎಂ ಸ್ಥಳ ಪರಿಶೀಲಿಸಿ, ರಾಜಮ್ಮ ಅವರ ಜಮೀನು ಬಿಡಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.
ಮಂಡ್ಯ ಜಿಲ್ಲೆಯ 96 ವರ್ಷದ ಪರಂಧಾಮಯ್ಯ ಅವರು ನಾಗಮಂಗಲದಿಂದ ತಾಳವಾಡಿಯ ಮಾರ್ಗ ಮಧ್ಯೆಯ ಜಮೀನು ಹೊಂದಿದ್ದು, ವ್ಯವಸಾಯ ಮಾಡುವ ಜಮೀನನ್ನು ಬೈಪಾಸಿಗೆ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ದೂರು ನೀಡಿದರು.
ಕೂಡಲೇ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಆನ್ ಲೈನ್ ಮೂಲಕ ಮಾತನಾಡಿದ ಮುಖ್ಯಮಂತ್ರಿಗಳು ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದರು. 96 ವರ್ಷದ ಪರಂದಾಮಯ್ಯ ಜೀವನೋತ್ಸಾಹಕ್ಕೆ ಮುಖ್ಯಮಂತ್ರಿಗಳು ಮೆಚ್ಚುಗೆ ಸೂಚಿಸಿ ಇನ್ನಷ್ಟು ಕಾಲ ಹೀಗೇ ಆರೋಗ್ಯವಾಗಿ ಗಟ್ಟಿಯಾಗಿರಿ ಎಂದು ಶುಭ ಕೋರಿದರು.
ಶೇ 75 ರಷ್ಟು ಅಂಗವೈಕಲ್ಯ ಹೊಂದಿರುವ ನಂದಿತಾ ಬಿ.ಎಂ ಪರಿಶಿಷ್ಟ ಜಾತಿಗೆ ಸೇರಿದ್ದಾರೆ. ಎಂ.ಕಾಂ ಪದವೀಧರೆಯಾಗಿರುವ ಇವರು ಸರ್ಕಾರಿ ಉದ್ಯೋಗ ಕೊಡಿಸುವಂತೆ ಮನವಿ ಮಾಡಿದರು.
ಅರ್ಜಿ ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚಿಸಿದರು.