1947ರ ಆಗಸ್ಟ್ 15ರಂದು ದೇಶ ಸ್ವಾತಂತ್ರ‍್ಯ ಪಡೆದ ಸಂಭ್ರಮದಲ್ಲಿದ್ದರೆ ಈ ಭಾಗಕ್ಕೆ ಸ್ವಾತಂತ್ರ‍್ಯ ದೊರೆತಿರಲಿಲ್ಲ. ರಜಾಕಾರರ ದೌರ್ಜನ್ಯ ಮಿತಿ ಮೀರಿತ್ತು. ತ್ಯಾಗ ಬಲಿದಾನಗಳಿಗೆ ಹೆಸರುವಾಸಿಯಾದ ಈ ನೆಲದ ಅಪ್ರತಿಮ ಹೋರಾಟಗಾರರ ಛಲ ಮತ್ತು ಜವಾಹರ್ ಲಾಲ್ ನೆಹರೂ ಮತ್ತು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ದೃಢ ನಿಶ್ಚಯದಿಂದಾಗಿ ಒಕ್ಕೂಟ ವ್ಯವಸ್ಥೆಗೆ ಸೇರುವಂತಾಯಿತು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಕಲ್ಯಾಣ ಕರ್ನಾಟಕ ಭಾಗವು (ಹೈದರಾಬಾದ್ ಕರ್ನಾಟಕ) ಹೈದರಾಬಾದ್ ನಿಜಾಮನ ಆಡಳಿತದಿಂದ ಮುಕ್ತಿ ಹೊಂದಿ, ಭಾರತಕ್ಕೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಬುಧವಾರ ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ ‘ಕಲ್ಯಾಣ ಕರ್ನಾಟಕ ಉತ್ಸವ’ಕ್ಕೆಚಾಲನೆ ನೀಡಿ ಮಾತನಾಡಿದರು.
“ಸ್ವಾತಂತ್ರ‍್ಯ ಹೋರಾಟದ ಜೊತೆಗೆ ಹೈದ್ರಾಬಾದ್ ಕರ್ನಾಟಕ ವಿಮೋಚನೆಗಾಗಿ ಹಾಗೂ ಹೈದ್ರಾಬಾದ್ ಕರ್ನಾಟಕ ಭಾಗವನ್ನು ಭಾರತದಲ್ಲಿ ವಿಲೀನಗೊಳಿಸಲು ನಡೆದ ಹೋರಾಟದಲ್ಲಿ ಭಾಗವಹಿಸಿದ್ದ ಶರಣಗೌಡ ಇನಾಂದಾರ, ರಾಜಾ ವೆಂಕಟಪ್ಪ ನಾಯಕ, ದತ್ತಾತ್ರೇಯ ಅವರಾದಿ, ಶಿವಮೂರ್ತಿಸ್ವಾಮಿ ಅಳವಂಡಿ, ಮಟಮಾರಿ ನಾಗಪ್ಪ, ನಾರಾಯಣರಾವ್ ಕನಿಹಾಳ, ಹಕೀಕತ್‌ರಾವ್ ಚಿಟಗುಪ್ಪಕರ, ಚಂದ್ರಶೇಖರ್ ಪಾಟೀಲ್, ರಾಮಾಚಾರ್, ಡಾ. ಚರ್ಚಿಹಾಳ್ ಮಠ, ರಾಮಚಂದ್ರ ವೀರಪ್ಪ, ಕಪತಪ್ಪ ಬೇಳೆ, ಎ.ವಿ.ಪಾಟೀಲ್, ಆರ್.ವಿ. ಬಿಡ್ಡಪ್ಪ, ಅಮರ್ ಸಿಂಗ್ ರಾಠೋಡ್ ಮುಂತಾದ ಎಲ್ಲ ಹೋರಾಟಗಾರರ ತ್ಯಾಗ ಬಲಿದಾನ ಅವಿಸ್ಮರಣೀಯ. ಇಂತಹ ಅಸಂಖ್ಯಾತ ಹೋರಾಟಗಾರರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ತಿಳಿಸಿದರು.
“ವಿಶ್ವಗುರು-ಸಾಂಸ್ಕೃತಿಕ ನಾಯಕ ಬಸವಣ್ಣನವರ ನೇತೃತ್ವದ ಶರಣರ ಚಳುವಳಿಯು ಇದೇ ಪುಣ್ಯಭೂಮಿಯಲ್ಲಿ ನಡೆದಿತ್ತು ಎಂಬುದು ಇಡೀ ಜಗತ್ತು ಹೆಮ್ಮೆ ಪಡುವ ಸಂಗತಿಯಾಗಿದೆ. ಉದಾತ್ತ ಪರಂಪರೆಗೆ ನಾಂದಿ ಹಾಡಿದ್ದ ಅಸಂಖ್ಯಾತ ಅನುಭಾವಿಗಳು, ಅವಧೂತರು, ಆರೂಢರು, ಸೂಫಿಸಂತರ ಕರ್ಮಭೂಮಿ ಇದು” ಎಂದು ಬಣ್ಣಿಸಿದರು.
“ಹಿಂದುಳಿದಿದ್ದ ಈ ಭಾಗವನ್ನು ಅಭಿವೃದ್ಧಿ ಮಾಡಬೇಕೆಂಬ ಉದ್ದೇಶದಿಂದ ಸನ್ಮಾನ್ಯ ದಿವಂಗತ ಡಾ. ಧರ್ಮಸಿಂಗ್‌ರವರ ನೇತೃತ್ವದ ಸಮಿತಿಯ ವರದಿ ಆಧರಿಸಿ, 1990ರಲ್ಲಿ ಹೈದ್ರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಲಾಯಿತು. ಅಭಿವೃದ್ಧಿ ಸಾಧ್ಯವಾಗಬೇಕಾದರೆ ವಿಶೇಷ ಸ್ಥಾನಮಾನದ ಅಗತ್ಯವಿದೆಯೆಂದು ಈ ಭಾಗದ ಹೋರಾಟಗಾರರು ನಿರಂತರವಾಗಿ ಹೋರಾಟ ನಡೆಸಿದ್ದರು. ಕೇಂದ್ರದ ಅಟಲ್ ಬಿಹಾರಿ ವಾಜಪೇಯಿಯವರ ನೇತೃತ್ವದ ಸರ್ಕಾರವು ಕಲ್ಯಾಣ ಕರ್ನಾಟಕಕ್ಕೆ ನೀಡಬೇಕಾದ ವಿಶೇಷ ಸ್ಥಾನಮಾನವನ್ನು ಕೊಡಲಾಗುವುದಿಲ್ಲವೆಂದು ಬಹುಕಾಲದ ಜನರ ಬೇಡಿಕೆಯನ್ನು ತಿರಸ್ಕರಿಸಿತ್ತು. ಆದರೆ ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸದೆ ದೇಶದ ಸಮಗ್ರ ಹಾಗೂ ಸುಸ್ಥಿರ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನರಿತ ಡಾ. ಮನಮೋಹನ್ ಸಿಂಗ್‌ರವರ ನೇತೃತ್ವದ ಯು.ಪಿ.ಎ. ಸರ್ಕಾರವು ಸಂವಿಧಾನಕ್ಕೆ ತಿದ್ದುಪಡಿ ತಂದು ಆರ್ಟಿಕಲ್ 371ಜೆ ಅನ್ನು ದಿನಾಂಕ 1-1-2013 ರಿಂದ ಜಾರಿಗೆ ಬರುವಂತೆ ಅಧಿಸೂಚನೆಗಳನ್ನು ಹೊರಡಿಸಿತು” ಎಂದರು.
“ವಿಶೇಷ ಸ್ಥಾನಮಾನಕ್ಕಾಗಿ ನಡೆದ ಹೋರಾಟಗಳ ಮುಖಂಡತ್ವ ವಹಿಸಿದ್ದ ಮಲ್ಲಿಕಾರ್ಜುನ ಖರ್ಗೆ, ದಿವಂಗತ ಧರ್ಮಸಿಂಗ್ ರವರು ಮುಂತಾದ ಅನೇಕ ಮಹನೀಯರ ಹೋರಾಟವನ್ನು ನಾವು ಮರೆಯಬಾರದು. ಹೋರಾಟದಿಂದ ತಕ್ಷಣಕ್ಕೆ ಸಿಕ್ಕ ಫಲ ನಮ್ಮ ಕಣ್ಣ ಮುಂದಿದೆ. 2013ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ವಿಶೇಷ ಸ್ಥಾನಮಾನ ನೀಡಿದ ನಂತರ ಇದುವರೆಗೆ ವಿವಿಧ ಇಲಾಖೆಗಳಲ್ಲಿ 1,19,923 ಹುದ್ದೆಗಳನ್ನು ನೇರ ನೇಮಕಾತಿಗೆ ಗುರುತಿಸಿದ್ದು, 84,620 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಇದೀಗ ಒಳ ಮೀಸಲಾತಿ ವಿಚಾರವನ್ನು ಬಗೆಹರಿಸಿರುವುದರಿಂದ ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ಉದ್ದೇಶಿಸಿದ್ದೇವೆ” ಎಂದು ಹೇಳಿದರು.
“ಕೆಕೆಆರ್‌ಡಿಬಿಗೆ 2013-14ನೇ ಸಾಲಿನಿಂದ 2025-26ನೇ ಸಾಲಿನವರೆಗೆ ಸರ್ಕಾರದಿಂದ 24,780 ಕೋಟಿ ರೂ.ಗಳಷ್ಟು ಅನುದಾನ ಹಂಚಿಕೆಯಾಗಿದೆ. ಇದುವರೆಗೆ 14,000 ಕೋಟಿ ರೂ.ಗಳಿಗಿಂತ ಹೆಚ್ಚಿನ ಅನುದಾನ ವೆಚ್ಚ ಮಾಡಲಾಗಿದೆ. 41,103 ಕಾಮಗಾರಿಗಳು ಕೈಗೆತ್ತಿಕೊಂಡಿದ್ದು, 32,985 ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, 8,118 ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿವೆ. ಕೆ.ಕೆ.ಆರ್.ಡಿ.ಬಿ.ಗೆ ಪ್ರಸಕ್ತ 2025-26ನೇ ಸಾಲಿಗೆ 5,000 ಕೋಟಿ ರೂಪಾಯಿಗಳನ್ನು ಒದಗಿಸಿ, ನುಡಿದಂತೆ ನಡೆಯುವ ಸರ್ಕಾರ ಎಂಬುದನ್ನು ಸಾಬೀತುಪಡಿಸಿದೆ. ಡಾ. ಅಜಯ್ ಧರ್ಮಸಿಂಗ್ ಅವರ ಅಧ್ಯಕ್ಷತೆಯ ಮಂಡಳಿಯು ಸಿದ್ಧಪಡಿಸಿದ್ದ ಕ್ರಿಯಾಯೋಜನೆಗೆ ಅನುಮೋದನೆ ದೊರೆತಿದ್ದು, ಕಾಮಾಗಾರಿಗಳು ಆರಂಭವಾಗುತ್ತಿವೆ” ಎಂದು ವಿವರಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಸ್.ಎಸ್.ಎ.ಲ್.ಸಿ. ಮತ್ತು ಪಿ.ಯು.ಸಿ.ಗಳಲ್ಲಿ ಉತ್ತೀರ್ಣರಾಗುವವರ ಪ್ರಮಾಣ ತೀರಾ ಕಡಿಮೆ ಇದೆ. ಶಿಕ್ಷಣದ ಗುಣಮಟ್ಟ ಕಾಪಾಡಲು ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಖಾಲಿ ಇರುವ 5,267 ಶಿಕ್ಷಕರ ಹುದ್ದೆಗಳ ಭರ್ತಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
“ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯ ಹೆಚ್ಚಳ ಹಾಗೂ ವಸತಿ ನಿಲಯ ಕಟ್ಟಡ ನಿರ್ಮಾಣ ಹೀಗೆ ಅನೇಕ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಕಳೆದ ಎರಡು ವರ್ಷದಿಂದ ‘ಅಕ್ಷರ ಆವಿಷ್ಕಾರ’ ಕಾರ್ಯಕ್ರಮ ರೂಪಿಸಿ ಇದೂವರೆಗೆ 6,000 ಕೋಟಿ ರೂ.ಗಳಿಗಿಂತ ಹೆಚ್ಚಿನ ಅನುದಾನಗಳನ್ನು ಖರ್ಚು ಮಾಡಲಾಗಿದೆ. ಈ ವರ್ಷದಿಂದ 10ನೇ ತರಗತಿಯ ಮಕ್ಕಳಿಗೆ ವಿಶೇಷ ತರಗತಿಗಳನ್ನು ಪ್ರಾರಂಭಿಸುತ್ತಿದ್ದೇವೆ” ಎಂದು ಹೇಳಿದರು.