Homeಕರ್ನಾಟಕಎಸ್‌ ಎಲ್ ಭೈರಪ್ಪ ಪಾರ್ಥಿವ ಶರೀರಕ್ಕೆ ಸಿಎಂ, ಡಿಸಿಎಂ ಅಂತಿಮ ನಮನ; ಸ್ಮಾರಕ ನಿರ್ಮಾಣ ಘೋಷಣೆ

ಎಸ್‌ ಎಲ್ ಭೈರಪ್ಪ ಪಾರ್ಥಿವ ಶರೀರಕ್ಕೆ ಸಿಎಂ, ಡಿಸಿಎಂ ಅಂತಿಮ ನಮನ; ಸ್ಮಾರಕ ನಿರ್ಮಾಣ ಘೋಷಣೆ

ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪ ಅವರ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಸೇರಿದಂತೆ ಸಚಿವ ಸಚಿವರಾದ ಶಿವರಾಜ್ ತಂಗಡಗಿ, ಮಧು ಬಂಗಾರಪ್ಪ ಸೇರಿದಂತೆ ವಿವಿಧ ಗಣ್ಯರು ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಗುರುವಾರ ಅಂತಿಮ ನಮನ ಸಲ್ಲಿಸಿದರು.

ಭೈರಪ್ಪ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, “ಭೈರಪ್ಪ ಅವರು ಹೆಚ್ಚಿನ ಸಮಯ ಮೈಸೂರಿನಲ್ಲೇ ಇದ್ದವರು. ಹೀಗಾಗಿ ಅವರ ಸ್ಮಾರಕವನ್ನು ಮೈಸೂರಿನಲ್ಲೇ ನಿರ್ಮಾಣ ಮಾಡಲಾಗುವುದು” ಎಂದು ಸಿದ್ದರಾಮಯ್ಯ ಘೋಷಿಸಿದರು.

ಬೈರಪ್ಪನವರ ಕಾದಂಬರಿಗಳು ಜಗತ್ಪ್ರಸಿದ್ಧ

“ಎಸ್.ಎಲ್ ಭೈರಪ್ಪನವರು ಅವರ ನಿಧನದಿಂದ ಸಾರಸ್ವತ ಲೋಕ ಬಹಳ ಬಡವಾಗಿದೆ. ಅವರು ಸುಮಾರು 25 ಕಾದಂಬರಿಗಳನ್ನು ಬರೆದಿದ್ದು, ಮೈಸೂರಿನಲ್ಲಿಯೇ ವಿದ್ಯಾಭ್ಯಾಸ ನಡೆಸಿದ ಬೈರಪ್ಪನವರಿಗೆ ಮೈಸೂರು ಕರ್ಮಸ್ಥಳ. ಅವರ ಕಾದಂಬರಿಗಳು 40 ಭಾಷೆಗಳಿಗೆ ತರ್ಜುಮೆಯಾಗಿದ್ದು, ಇಷ್ಟು ಸಂಖ್ಯೆಯಲ್ಲಿ ಸಾಹಿತಿಯೊಬ್ಬರ ಕೃತಿಗಳು ತರ್ಜುಮೆಯಾಗಿರುವುದು ಅಪರೂಪ. ವಿವಿಧ ಭಾಷೆಗಳ ಓದುಗರನ್ನು ಸಂಪಾದಿಸಿದ್ದರು. ಸಣ್ಣ ಗ್ರಾಮವೊಂದರಲ್ಲಿ ಜನಿಸಿದ ಬೈರಪ್ಪನವರು , ಫಿಲಾಸಫಿಯನ್ನು ಓದಿದ್ದರೂ, ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡವರು” ಎಂದರು.

ಬದುಕಿನ ಅನುಭವಗಳನ್ನಾಧರಿಸಿ ಬರೆಯುವ ಸಾಹಿತಿ

“ಬೋಧನಾ ವೃತ್ತಿಯಲ್ಲಿದ್ದುಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನೂ ತೊಡಗಿಸಿಕೊಂಡಿದ್ದರು. ಕಾದಂಬರಿಗಳನ್ನು ಆತ್ಮತೃಪ್ತಿಗಾಗಿ ಬರೆಯುತ್ತಿದ್ದ ಅವರ ಕೃತಿಗಳು ಜಗತ್ಪ್ರಸಿದ್ಧವಾಗಿದ್ದವು. ನಾನು ಅವರ ಕೆಲವೊಂದು ಕಾದಂಬರಿಗಳನ್ನು ಓದಿದ್ದೇನೆ. ಬದುಕಿನ ಅನುಭವಗಳನ್ನಾಧರಿಸಿ ಬರೆಯುವ ಸಾಹಿತಿ. ಅವರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬದವರು, ಸಾಹಿತ್ಯಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸಲು ಶಕ್ತಿಯನ್ನು ಭಗವಂತ ನೀಡಲಿ” ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.

ಮೈಸೂರಿನಲ್ಲಿ ಸ್ಮಾರಕ

“ಎಸ್.ಎಲ್.ಭೈರಪ್ಪನವರ ಸ್ಮಾರಕ ನಿರ್ಮಾಣದ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರು ಹೇಳಿದರೆಂದು ಸ್ಮಾರಕ ನಿರ್ಮಿಸುವುದಿಲ್ಲ. ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು. ಮೈಸೂರಿನಲ್ಲಿಯೇ ತಮ್ಮ ಜೀವಿತಾವಧಿಯನ್ನು ಕಳೆದಿದ್ದು, ವಿದ್ಯಾಭ್ಯಾಸ, ಸಾಹಿತ್ಯಕೃಷಿಯಲ್ಲಿ ನಡೆಸಿದ್ದರು” ಎಂದರು.

ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಭೈರಪ್ಪನವರೊಂದಿಗೆ ಮುಖ್ಯಮಂತ್ರಿಗಳ ಒಡನಾಟದ ಬಗ್ಗೆ ಪ್ರತಿಕ್ರಿಯೆ ನೀಡಿ, ಸಾಹಿತ್ಯ ಹಾಗೂ ಸ್ನೇಹ ಬೇರೆಯಾಗಿದ್ದು, ನಮ್ಮ ದೃಷ್ಟಿಕೋನಗಳು ಬೇರೆಯಾಗಿದ್ದರೂ, ಉತ್ತಮ ಬಾಂಧವ್ಯವಿತ್ತು ಎಂದರು. ಬೈರಪ್ಪನವರ ಅಂತ್ಯಕ್ರಿಯೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಭಾಗವಹಿಸಲಿದ್ದಾರೆ. ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿರುವ ಬೈರಪ್ಪನವರು ನಾಡು ಕಂಡ ಶ್ರೇಷ್ಠ ಸಾಹಿತಿಗಳಾಗಿದ್ದರು. ಯಾವುದೇ ಪ್ರಶಸ್ತಿಗೂ ಹಂಬಲಿಸದ ಬೈರಪ್ಪನವರಿಗೆ ಅವರ ಸಾಹಿತ್ಯದ ಕೊಡುಗೆಯನ್ನು ಪರಿಗಣಿಸಿ, ಕೇಂದ್ರ ಸರ್ಕಾರ ಜ್ಞಾನಪೀಠ ಪ್ರಶಸ್ತಿಯನ್ನು ನೀಡಿದ್ದರೆ ಉತ್ತಮವಾಗಿತ್ತು” ಎಂದರು.

“ಭೈರಪ್ಪ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಸಾಹಿತಿ. ವಿಶ್ವದ ಹಲವು ಭಾಷೆಗಳಿಗೆ ಅವರ ಕಾದಂಬರಿ ಅನುವಾದಗೊಂಡಿವೆ. ಅವರ ಕಾದಂಬರಿಗಳು ಸಿನೆಮಾಗಳು ಕೂಡ ಆಗಿವೆ. ಸಂಸ್ಕೃತಿ ಎತ್ತಿ ಹಿಡಿದು ಸಮಾಜಕ್ಕೆ ಮಾರ್ಗದರ್ಶನ ಮಾಡಿದವರು ಭೈರಪ್ಪ” ಎಂದು ಡಿಸಿಎಂ ಡಿ ಕೆ ಶಿವಕುಮಾರ್‌ ಹೇಳಿದರು.

ಇದಕ್ಕೂ ಮುನ್ನ ಅಂತಿಮ ದರ್ಶನ ಪಡೆದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಭೈರಪ್ಪ ಅವರ ಸ್ಮಾರಕ ನಿರ್ಮಿಸಬೇಕೆಂದು ಆಗ್ರಹಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments