ಗ್ರಾಮೀಣ ಪ್ರದೇಶಗಳಿಗೆ ಶುದ್ಧ ನೀರು ಒದಗಿಸಲು ಪ್ರಾಮುಖ್ಯತೆ ಗುಣಮಟ್ಟ ಪರೀಕ್ಷೆಗೆ ರಾಜ್ಯ ಸರ್ಕಾರದಿಂದ 52 ಕೋಟಿ ರೂ. ವೆಚ್ಚ ಎರಡು ವರ್ಷಗಳಿಂದ ಕೇಂದ್ರದ ಅನುದಾನ ಇಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತು ಪತ್ರಿಕ ಪ್ರಕಟಣೆ ಹೊರಡಿಸಿರುವ ಅವರು, “ರಾಜ್ಯದಾದ್ಯಂತ ಸ್ಥಾಪಿಸಲಾಗಿರುವ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ನಿರ್ವಹಣೆ ಪ್ರಯೋಗಾಲಯಗಳ ಮೂಲಕ ನೀರಿನ ಗುಣಮಟ್ಟ ಪರೀಕ್ಷೆಗಳನ್ನು ಕೈಗೊಳ್ಳಲು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದ್ದು, ರಾಜ್ಯ ಸರ್ಕಾರ 2024-25 ನೇ ಸಾಲಿನಲ್ಲಿ 23.52 ಕೋಟಿ ರೂ. ಮತ್ತು ಪ್ರಸಕ್ತ ಸಾಲಿನಲ್ಲಿ ಇಲ್ಲಿಯವರೆವಿಗೂ 28.85 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ” ಎಂದು ತಿಳಿಸಿದ್ದಾರೆ.
“ಕೇಂದ್ರ ಸರ್ಕಾರ ಜಲ ಜೀವನ್ ಮಿಷನ್ ಯೋಜನೆಯಡಿ ನೀರಿನ ಗುಣಮಟ್ಟ ಮೇಲ್ವಿಚಾರಣೆ ಮತ್ತು ಕಣ್ಗಾವಲು ಕಾರ್ಯಕ್ರಮಕ್ಕೆ ಶೇ. 2ರಷ್ಟು ಅನುದಾನ ಬಿಡುಗಡೆಗೊಳಿಸಬೇಕಾಗಿದ್ದು, ಕಳೆದ ವರ್ಷ ಹಾಗೂ ಪ್ರಸಕ್ತ ವರ್ಷ ಕೇಂದ್ರ ಸರ್ಕಾರ ತನ್ನ ಪಾಲಿನ ಅನುದಾನ ಬಿಡುಗಡೆಗೊಳಿಸದೇ ಇದ್ದರೂ, ಗ್ರಾಮೀಣ ಜನರಿಗೆ ಶುದ್ಧ ನೀರು ಸರಬರಾಜು ಮಾಡಬೇಕೆಂಬ ಸಂಕಲ್ಪದಿಂದ ರಾಜ್ಯ ಸರ್ಕಾರವೇ ಈ ವೆಚ್ಚವನ್ನು ಭರಿಸಿದೆ” ಎಂದೂ ಸಚಿವರು ಹೇಳಿದ್ದಾರೆ.
“ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ನೀರು ಸರಬರಾಜು ಮಾಡಲು ಕಾಲ-ಕಾಲಕ್ಕೆ ಇಲಾಖೆಯಿಂದ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಕ್ರಮ ವಹಿಸಿರುವುದರಿಂದ ಪ್ರಸಕ್ತ ಸಾಲಿನಲ್ಲಿ ರಾಜ್ಯದ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಕಲುಷಿತ ನೀರಿನಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿರುವಂತಹ ಪ್ರಕರಣಗಳು ಕಂಡುಬಂದಿರುವುದಿಲ್ಲ” ಎಂದೂ ಸಚಿವರು ತಿಳಿಸಿದ್ದಾರೆ.
“ರಾಜ್ಯಾದ್ಯಂತ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಮೂಲಗಳನ್ನು ನಿಗದಿಪಡಿಸಲಾಗಿರುವ ಮಾರ್ಗಸೂಚಿಗಳ ಅನುಗುಣವಾಗಿ ಬಿಐಎಸ್: 10500-2012 ಗುಣಮಟ್ಟದಂತೆ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ, ರಾಜ್ಯದಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಮಟ್ಟದ ಪ್ರಯೋಗಾಲಯಗಳು ಮತ್ತು 47 ತಾಲ್ಲೂಕು ಮಟ್ಟದ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ. ಈ ಪ್ರಯೋಗಾಲಯಗಳಲ್ಲಿ 2023-24ರಿಂದ ನೀರಿನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ” ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
“ರಾಜ್ಯದಲ್ಲಿ 2023-24ರಲ್ಲಿ ಲಕ್ಷ, 2025-25ರಲ್ಲಿ 3.90 ಲಕ್ಷ ಹಾಗೂ 2025-26ರಲ್ಲಿ 2.46 ಲಕ್ಷ ನೀರಿನ ಮಾದರಿಗಳನ್ನು ಸಂಗ್ರಹಿಸಸಲಾಗಿದ್ದು, ಇವುಗಳಲ್ಲಿ 9.34 ಲಕ್ಷ ಮಾದರಿಗಳಲ್ಲಿ ರಾಸಾಯನಿಕಗಳು, 7244 ಮಾದರಿಗಳಲ್ಲಿ ಬ್ಯಾಕ್ಟೀರಿಯಾ ಪತ್ತೆಯಾಗಿದ್ದವು. ಈ ಪೈಕಿ ಕಲುಷಿತ ನೀರು ಎಂದು ಕಂಡು ಬಂದ 49,309 ನೀರಿನ ಮಾದರಿಗಳಿಗೆ ಪರ್ಯಾಯ ಕ್ರಮಗಳನ್ನು ಕೈಗೊಂಡು ನೀರು ಪೂರೈಸಲಾಗಿದೆ” ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿವರ ನೀಡಿದ್ದಾರೆ.
“ನೀರಿನ ಮಾದರಿಯ ವರದಿಯು ಬಿಐಎಸ್: 10500-2012 ಗುಣಮಟ್ಟದ ಮಿತಿಗಿಂತ ಹೆಚ್ಚಾಗಿರುವುದು ಕಂಡುಬಂದ ನೀರಿನ ಮಾದರಿಗಳನ್ನು ಪ್ರಯೋಗಾಲಯಗಳಲ್ಲಿ ಮರುಪರೀಕ್ಷೆಗೆ ಒಳಪಡಿಸಿ ಗುಣಮಟ್ಟವನ್ನು ಖಚಿತಪಡಿಸಿಕೊಂಡು ಕಲುಷಿತ ನೀರಿಗೆ ಪರ್ಯಾಯವಾಗಿ ಇತರೆ ಮೂಲಗಳಿಂದ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ” ಎಂಬ ಮಹತ್ತರ ಮಾಹಿತಿ ಹಂಚಿಕೊಂಡಿದ್ದಾರೆ.
“ಕುಡಿಯುವ ನೀರಿನ ಗುಣಮಟ್ಟದ ಪರೀಕ್ಷೆಗೆ ಒತ್ತು ನೀಡುವ ಸಲುವಾಗಿ ಹೆಚ್ಚಿನ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳಲು ಎನ್.ಎ.ಬಿ.ಎಲ್ (NABL) ಮಾನ್ಯತೆ ಪಡೆದಿರುವ ಮೂರನೇ ಸಂಸ್ಥೆ/ಖಾಸಗಿ ಪ್ರಯೋಗಾಲಯಗಳಲ್ಲಿ 2023-24 ಮತ್ತು 2024-25ನೆ ಸಾಲಿನಲ್ಲಿ 66811 ನೀರಿನ ಮಾದರಿಗಳ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಂಡು ಈ ವೆಚ್ಚವನ್ನು ಕರ್ನಾಟಕ ಸರ್ಕಾರದ ಅನುದಾನದಡಿ ಭರಿಸಲಾಗಿದೆ, ಕಲ್ಯಾಣ ಕರ್ನಾಟಕ ಭಾಗದ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಬರುವ ನೀರಿನ ಮಾದರಿಗಳ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳಲು ರಾಯಚೂರು ಕೃಷಿ ವಿಶ್ವವಿದ್ಯಾಲಯದೊಂದಿಗೆ ಕರಾರು ಒಪ್ಪಂದ ಮಾಡಿಕೊಳ್ಳಲಾಗಿದ್ದು, ವಿಶ್ವವಿದ್ಯಾಲಯದ ಸೂಕ್ಷ್ಮಜೀವಾಣು ಪರೀಕ್ಷಾ ಪ್ರಯೋಗಾಲಯಗಳಲ್ಲಿ ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ ಮತ್ತು ಬಳ್ಳಾರಿ ಜಿಲ್ಲೆಗಳ ನೀರಿನ ಮಾದರಿಗಳ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದೆ” ಎಂದೂ ಸಚಿವರು ತಿಳಿಸಿದ್ದಾರೆ.
“ಪ್ರಾಥಮಿಕವಾಗಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಗೆ ಬರುವ ಗ್ರಾಮಗಳು ಹಾಗೂ ಜನವಸತಿ ಪ್ರದೇಶಗಳಲ್ಲಿ ಬರುವ ಎಲ್ಲಾ ಕುಡಿಯುವ ನೀರಿನ ಮೂಲಗಳ ಸಂಭಾವ್ಯ (Presumptive) ಗುಣಮಟ್ಟದ ಪರೀಕ್ಷೆಗಳನ್ನು ಕ್ಷೇತ್ರ ಪರೀಕ್ಷಾ ಸಾಧನಗಳ (Field Test kit) ಮೂಲಕ ಕೈಗೊಳ್ಳಲಾಗುತ್ತಿದೆ, ಮಳೆಗಾಲ ಆರಂಭವಾಗುವ ಮುನ್ನ ಮತ್ತು ಮಳೆಗಾಲದ ನಂತರ ನೀರಿನ ಮಾದರಿಗಳ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳುವ ಸಲುವಾಗಿ ರಾಜ್ಯಾದ್ಯಂತ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ” ಎಂದು ಹೇಳಿದ್ದಾರೆ.
“ಈ ಬಾರಿಯ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಜನವಸತಿ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲು ಮುನ್ನೆಚ್ಚರಿಕೆ ಕ್ರಮವಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಎಲ್ಲಾ ನೀರಿನ ಶೇಖರಣಾ ಘಟಕಗಳನ್ನು ಕಾಲ-ಕಾಲಕ್ಕೆ ಸ್ವಚ್ಛಗೊಳಿಸಲು ಮತ್ತು ಕ್ಲೋರಿನೇಷನ್ ಕೈಗೊಳ್ಳುವಂತೆಯೂ ಸೂಚಿಸಲಾಗಿದೆ “ಎಂದು ಸಚಿವರು ತಿಳಿಸಿದ್ದಾರೆ.


