ಮಾಜಿ ಸಚಿವ, ಎಂಎಲ್ಸಿ ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಸಿ.ಟಿ ರವಿ ಅವರು ಅಶ್ಲೀಲ ಪದ ಬಳಸಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಇನ್ನೂ ಕೆಲವರು ಸಿ.ಟಿ ರವಿ ಅವರು ಅಶ್ಲೀಲ ಪದ ಬಳಸಿಲ್ಲ ಎನ್ನುತ್ತಿದ್ದಾರೆ. ಹೀಗಾಗಿ, ಸತ್ಯಾಸತ್ಯತೆ ತಿಳಿಯಲು ಸಿಐಡಿ ತನಿಖೆಗೆ ಆದೇಶ ಮಾಡಲಾಗಿದೆ” ಎಂದರು.
“ಸಭಾಪತಿ ಅವರು ತಮ್ಮ ಕೆಲಸ ಮಾಡಿದ್ದಾರೆ. ಪೊಲೀಸರು ತನಿಖೆ ಮಾಡಬೇಕು. ಸ್ಥಳ ಮಹಜರು ನಡೆಸಲು ಅನುಮತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಸಭಾಪತಿಗಳು ಅನುಮತಿ ಇಲ್ಲದೆ ಸದನದ ಮಹಜರು ಮಾಡಲು ಸಾಧ್ಯವಿಲ್ಲ. ಪರಿಷತ್ತಿಗೆ ತನ್ನದೇ ಆದ ನಿಯಮಗಳಿದ್ದು, ಪೊಲೀಸರು ಆ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಾರೆ” ಎಂದು ಹೇಳಿದರು.
ಅಸಮರ್ಥ ಗೃಹ ಸಚಿವ ಎಂಬ ಪ್ರಲ್ಹಾದ್ ಜೋಶಿ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್ ತಿರುಗೇಟು ನೀಡಿದರು. ಪ್ರಲ್ಹಾದ್ ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ. ನಾನು ಜೋಶಿ ಅವರನ್ನು ಅಸಮರ್ಥ ಕೇಂದ್ರ ಸಚಿವ ಎಂದು ಹೇಳಬಹುದು. ಆದರೆ, ಅದು ಎಷ್ಟು ಸಮಂಜಸ? ಅವರ ಹೇಳಿಕೆಯೇ ಅವರನ್ನು ಅಸಮರ್ಥ ಸಚಿವ ಎನ್ನುವುದನ್ನು ಹೇಳುತ್ತಿದೆ” ಎಂದು ಕುಟುಕಿದರು.
ಹಳೇಹುಬ್ಬಳ್ಳಿ ಠಾಣೆ ಇನ್ಸ್ಪೆಕ್ಟರ್ ವಿರುದ್ಧ ಮಹಿಳಾ ಸಿಬ್ಬಂದಿ ಪತ್ರ ಬರೆದ ವಿಚಾರವಾಗಿ ಮಾತನಾಡಿದ ಅವರು,”ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳ ಬಳಿ ವರದಿ ತರಸಿಕೊಳ್ಳುತ್ತೇನೆ. ತಪ್ಪು ಮಾಡಿದ್ದೇರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ” ಎಂದು ತಿಳಿಸಿದರು.
“ಬೆಳಗಾವಿಯಲ್ಲಿ ಎಐಸಿಸಿ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ಮಾಡುತ್ತಿದ್ದೇವೆ. ಗಾಂಧೀಜಿ ಮೊದಲ ಬಾರಿಗೆ ಎಐಸಿಸಿ ಅಧ್ಯಕ್ಷರಾಗಿ ನೂರು ವರ್ಷ ಕಳೆದಿದೆ. ಕಾರ್ಯಕ್ರಮದಲ್ಲಿ ಇಡೀ ಕಾಂಗ್ರೆಸ್ ಸಮುದಾಯ ಭಾಗಿಯಾಗುತ್ತೆ. ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಭಾಗಿಯಾಗಲಿದ್ದಾರೆ. ಇದೊಂದು ಐತಿಹಾಸಿಕ ಕಾರ್ಯಕ್ರಮ” ಎಂದು ಹೇಳಿದರು.