ಆಂಧ್ರ ಪ್ರದೇಶದ ಕರ್ನೂಲ್ ಘಟನೆ ಮಾಸುವ ಮುನ್ನವೇ ಮತ್ತೊಂದು ಘನಘೋರ ದುರಂತ ರಾಜ್ಯದಲ್ಲಿ ಸಂಭವಿಸಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೊರ್ಲತ್ತು ಕ್ರಾಸ್ ಬಳಿ ನಸುಕಿನ 3 ಗಂಟೆಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 6 ಮಂದಿ ಪ್ರಯಾಣಿಕರು ಸಜೀವ ದಹನವಾಗಿದ್ದಾರೆ.
ಹಿರಿಯೂರಿನಿಂದ ಬೆಂಗಳೂರಿಗೆ ತೆರಳುತಿದ್ದ ಲಾರಿ ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಸೀಬರ್ಡ್ ಸ್ಲೀಪರ್ ಕೋಚ್ ಬಸ್ಸಿಗೆ ಗುದ್ದಿದೆ. ಲಾರಿ ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯಿಂದ ಡಿವೈಡರ್ ದಾಟಿ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಬಸ್ಸಿಗೆ ಬೆಂಕಿ ಹೊತ್ತುಕೊಂಡಿದೆ ಎನ್ನಲಾಗಿದೆ.
ಬಸ್ನಲ್ಲಿದ್ದವರ ಪೈಕಿ ಹೆಚ್ಚಿನವರು ಗೋಕರ್ಣದವರಾಗಿದ್ದು, ಹೀಗಾಗಿ ಮೃತಪಟ್ಟವರಲ್ಲಿ ಹೆಚ್ಚಿನವರು ಅಲ್ಲಿನವರೇ ಇರಬಹುದು ಎಂದು ಶಂಕಿಸಲಾಗಿದೆ. ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಹೊರಟಿದ್ದ ಖಾಸಗಿ ಸೀಬರ್ಡ್ ಸ್ಲೀಪರ್ ಬಸ್, ಶಿವಮೊಗ್ಗ ಮತ್ತು ಹೊನ್ನಾವರ ಮಾರ್ಗವಾಗಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ತೆರಳುತ್ತಿತ್ತು. 32 ಆಸನ ಸಾಮರ್ಥ್ಯದ ಬಸ್‌ನಲ್ಲಿ 29 ಆಸನಗಳು ಕಾಯ್ದಿರಿಸಲಾಗಿದ್ದು, 25 ಪ್ರಯಾಣಿಕರು ಗೋಕರ್ಣಕ್ಕೆ, ಇಬ್ಬರು ಕುಮಟಾಕ್ಕೆ ಮತ್ತು ಇಬ್ಬರು ಶಿವಮೊಗ್ಗಕ್ಕೆ ಪ್ರಯಾಣಿಸುತ್ತಿದ್ದರು.
ಹಲವರಿಗೆ ಗಂಭೀರ ಗಾಯಗಳಾಗಿವೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಲಾರಿ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಅಪಘಾತದ ಮಾಹಿತಿ ದೊರೆತ ತಕ್ಷಣ ಚಿತ್ರದುರ್ಗ ಜಿಲ್ಲೆಯ ಡಿವೈಎಸ್ಪಿ ಶಿವಕುಮಾರ್, ರೂರಲ್ ಇನ್ಸ್‌ಪೆಕ್ಟರ್ ಆನಂದ್, ಇನ್ಸ್‌ಪೆಕ್ಟರ್ ಗುಂಡಪ್ಪ, ಹಾಗೂ ಚಿತ್ರದುರ್ಗ ಎಸ್.ಪಿ. ರಣದೀಪ್ ಮಂಡಾರು ಮತ್ತು ತುಮಕೂರಿನ ಎಸ್.ಪಿ. ಅಶೋಕ್ ಸ್ಥಳಕ್ಕೆ ದಾವಿಸಿ ರಕ್ಷಣಾ ಕಾರ್ಯಗಳನ್ನು ನಡೆಸಿದ್ದಾರೆ.
ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ನಡೆಸಿದರು. 9 ಮಂದಿ ಗಾಯಾಳುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಾಳುಗಳನ್ನು ಹಿರಿಯೂರು, ಶಿರಾಗೆ ಸಮೀಪದ ಆಸ್ಪತ್ರೆಗಳಿಗೆ ಹಾಗೂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಕ್ಷಿಸಲ್ಪಟ್ಟವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.


