ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ ಸಮೀಪವಿರುವ ಜೈಲ್ ರಸ್ತೆಯಲ್ಲಿರುವ ಪಾಳುಬಿದ್ದ ಮನೆಯಲ್ಲಿ ಐದು ಅಸ್ಥಿಪಂಜರ ಪತ್ತೆ ಆಗಿವೆ. ಸ್ಥಳೀಯರೊಬ್ಬರು ನೀಡಿದ ಮಾಹಿತಿ ಅಧರಿಸಿ ಪೊಲೀಸರು ಪಾಳುಬಿದ್ದ ಮನೆಯಲ್ಲಿ ಪರಿಶೀಲಿಸಿದಾಗ ಈ ಅಸ್ಥಿಪಂಜರಗಳು ಕಂಡುಬಂದಿವೆ.
ಪವನ್ ಕುಮಾರ್ ಎಂಬುವರು ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಮನೆಯಲ್ಲಿ ಪವನ್ ಕುಮಾರ್ ಸಂಬಂಧಿ ಜಗನ್ನಾಥರೆಡ್ಡಿ ಮತ್ತು ಕುಟುಂಬ ವಾಸವಾಗಿದ್ದರು. ಜಗನ್ನಾಥರೆಡ್ಡಿ, ಪತ್ನಿ ಪ್ರೇಮಕ್ಕ, ಪುತ್ರಿ ತ್ರಿವೇಣಿ, ಪುತ್ರರಾದ ಕೃಷ್ಣರೆಡ್ಡಿ, ನರೇಂದ್ರರೆಡ್ಡಿ ವಾಸವಾಗಿದ್ದರು ಎನ್ನಲಾಗಿದೆ.
ಗುರುವಾರ ತಡರಾತ್ರಿ ವರೆಗೂ ಮನೆಯಲ್ಲೇ ಬೀಡುಬಿಟ್ಟು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಡಿವೈಎಸ್‌ಪಿ ಪಿ.ಅನಿಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ? ಇಲ್ಲವೇ ಕೊಲೆಯಾಗಿದ್ದಾರೆಯೇ? ಎಂಬುವುದರ ಕುರಿತು ಇನ್ನಷ್ಟೇ ತಿಳಿಯಬೇಕಿದೆ.
ಬುಧವಾರ (ಡಿ.27) ರಂದು ಕಳ್ಳರು ಬಾಗಿಲು ಹೊಡೆದು ಹಾಗೇ ಹೋಗಿರಬಹುದು. ಗುರುವಾರ (ಡಿ.28) ರ ಸಂಜೆ ವೇಳೆ ನಾಯಿಗಳು ಮನೆಯೊಳಗೆ ಹೋಗಿವೆ. ನಾಯಿಗಳು ತಲೆ ಬುರುಡೆಗಳನ್ನು ತಂದು ಮನೆ ಬಾಗಿಲ ಬಳಿ ಹಾಕಿರಬಹುದು. ತಲೆ ಬುರುಡೆ ಕಂಡ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಅಸ್ಥಿಪಂಜರಗಳನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳಿಸಲು ತೀರ್ಮಾನಿಸಲಾಗಿದೆ. ಪೊಲೀಸರ ಸೂಕ್ತ ತನಿಖೆ ಬಳಿಕವಷ್ಟೇ ಐದು ಅಸ್ಥಿಪಂಜರಗಳ ಹಿನ್ನೆಲೆ ಗೊತ್ತಾಗಲಿದೆ.
ಘಟನೆ ಬಗ್ಗೆ ಜಗನ್ನಾಥರೆಡ್ಡಿ ಸಂಬಂಧಿ ಪವನ್ ಕುಮಾರ್ ಪ್ರತಿಕ್ರಿಯಿಸಿದ್ದು, “ಜಗನ್ನಾಥರೆಡ್ಡಿ (80) ನಿವೃತ್ತ ಇಂಜಿನಿಯರ್ ಆಗಿದ್ದರು. ಸುಮಾರು ವರ್ಷಗಳಿಂದ ಜಗನ್ನಾಥರೆಡ್ಡಿ ಕುಟುಂಬ ನಮ್ಮ ಸಂಪರ್ಕದಲ್ಲಿರಲಿಲ್ಲ. ನಮ್ಮ ಮನೆಗೆ ಅವರು ಬರುತ್ತಿರಲಿಲ್ಲ, ಅವರ ಮನೆಗೆ ನಾವು ಹೋಗುತ್ತಿರಲಿಲ್ಲ. ಕೆಲ ವರ್ಷಗಳಿಂದ ಜಗನ್ನಾಥರೆಡ್ಡಿ ಮತ್ತು ಕುಟುಂಬದವರು ಕಂಡಿಲ್ಲ. ಜಗನ್ನಾಥರೆಡ್ಡಿ ಮನೆಯಲ್ಲಿ ಪತ್ತೆ ಆಗಿರುವ ಅಸ್ಥಿಪಂಜರ ಅವರದ್ದೇ ಆಗಿರಬಹುದು. ಮೂರು ವರ್ಷದ ಹಿಂದೆಯೇ ಅವರು ಮನೆಯಲ್ಲೇ ಮೃತಪಟ್ಟಿರಬಹುದು” ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.