ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಣೆಯಾಗಿದ್ದು, ಹಿರಿಯ ನಾಯಕ ಗೋವಿಂದ ಕಾರಜೋಳ ಅವರನ್ನು ಕಣಕ್ಕಿಳಿಸಲಾಗುತ್ತಿದೆ.
ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಬಳಿಕ ಬಿಜೆಪಿ ಪಾಲಾದ 25 ಕ್ಷೇತ್ರಗಳ ಪೈಕಿ 24 ಕ್ಷೇತ್ರಕ್ಕೆ ಬಿಜೆಪಿ ಹಂತ ಹಂತವಾಗಿ ಟಿಕೆಟ್ ಘೋಷಣೆ ಮಾಡಿತ್ತು. ಆದರೆ, ಚಿತ್ರದುರ್ಗ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡದೆ ಕಾಯ್ದಿರಿಸಿತ್ತು. ಸದ್ಯ ಮಾರ್ಚ್ 28 ರಿಂದ ಚುನಾವಣೆ ಪ್ರಕ್ರಿಯೆ ಆರಂಭ, ನಾಮಪತ್ರ ಸಲ್ಲಿಕೆಗೆ ಚಾಲನೆ ದೊರೆಯುತ್ತಿದೆ. ಈ ಬೆನ್ನಲ್ಲೆ ಚಿತ್ರದುರ್ಗ ಟಿಕೆಟ್ ಘೋಷಣೆ ಮಾಡಲಾಗಿದೆ.
ಚಿತ್ರದುರ್ಗ ಪರಿಶಿಷ್ಟ ಜಾರಿ (ಎಸ್‌ಸಿ) ಮೀಸಲು ಕ್ಷೇತ್ರವಾಗಿದೆ. ಸೂಕ್ತ ಅಭ್ಯರ್ಥಿ ಸಿಗದ ಹಿನ್ನೆಲೆ ಬಾಗಲಕೋಟೆ ಮೂಲದವರಾದರೂ, ಹಿರಿಯ ಹಾಗೂ ಸಮುದಾಯದ ನಾಯಕ ಎಂಬ ವರ್ಚಸ್ಸಿನಿಂದ ಕಾರಜೋಳ ಅವರಿಗೆ ಟಿಕೆಟ್ ನೀಡಲಾಗಿದೆ.
ಇತ್ತ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಂಸದ ಬಿಎನ್ ಚಂದ್ರಪ್ಪ ಅವರು ಕಣಕ್ಕೆ ಇಳಿದಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಡಲಿದೆ. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿ, ಕೇಂದ್ರದಲ್ಲಿ ಮಂತ್ರಿಯಾಗಿದ್ದ ಎ. ನಾರಾಯಣಸ್ವಾಮಿ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ.