ಮಕ್ಕಳು ಕೈಗೆ ಮೈಗೆ ಮಣ್ಣು ಮತ್ತಿಕೊಂಡು ಬಂದರೆ ಖುಷಿ ಪಡಿ, ಅದೇ ಮಕ್ಕಳ ಕೈಗೆ ಮೊಬೈಲ್ ಅಂಟಿಸಿಕೊಂಡರೆ ಭಯ ಪಡಿ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಪೋಷಕರಿಗೆ ಕಿವಿಮಾತು ಹೇಳಿದರು.
ಬಾಲಭವನ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, “ನಮ್ಮ ಹಿರಿಯರು ಆಡಿ ಕಲಿ-ಬರೆದು ಕಲಿ ಎಂದು ಯಾವಾಗ್ಲೂ ಹೇಳುತ್ತಿದ್ದರು. ಇದರ ಗುಟ್ಟು ಏನು ಗೊತ್ತಾ? ನಮ್ಮ ಬೆರಳಿನ ತುದಿಗಳಿಗೂ ನಮ್ಮ ಮೆದುಳಿಗೂ ನೇರ ನೇರ ಕನೆಕ್ಷನ್ (ಸಂಪರ್ಕ) ಇದೆ. ನಮ್ಮ ದೇಹದ ನರಮಂಡಲ ಮೆದುಳಿನಿಂದ ಶುರುವಾಗಿ ಬೆರಳ ತುದಿಯಲ್ಲಿ ಕೊನೆಗೊಳ್ಳುತ್ತದೆ. ಹೀಗಾಗಿ ಬೆರಳ ತುದಿಗಳು ಹೆಚ್ಚು active ಆಗಿದ್ದಷ್ಟೂ ಮೆದುಳು ಹೆಚ್ಚೆಚ್ಚು active ಆಗುತ್ತದೆ” ಎಂದರು.
“15 ವರ್ಷದ ಒಳಗೆ ಮಕ್ಕಳ ಮೆದುಳಿನ ಬೆಳವಣಿಗೆ ಬಹುತೇಕ ಮುಗಿದಿರುತ್ತದೆ. ಆದ್ದರಿಂದ 15 ವರ್ಷದ ಒಳಗೆ ಮಕ್ಕಳು ಏನನ್ನಾದರೂ ಕಲಿತು ಬಿಡುತ್ತಾರೆ. ಸಂಗೀತ, ನೃತ್ಯ, ಹಲವು ಭಾಷೆಗಳನ್ನು ಕಲಿಯಲು 15 ವರ್ಷದ ಒಳಗಿನ ಮಕ್ಕಳಲ್ಲಿ ಹೆಚ್ಚು ಸಾಮರ್ಥ್ಯ ಇರುತ್ತದೆ. ಈಗಿನ ತಾಯಂದಿರು ಮಕ್ಕಳು ಕೈಗೆ ಮಣ್ಣು ಮೆತ್ತಿಕೊಂಡರೆ ರಟ್ಟೆ ಹಿಡಿದು ದರ ದರನೆ ಎಳೆದುಕೊಂಡು ಹೋಗಿ ಎರಡು ಭಾರಿಸಿ ರೂಮಲ್ಲಿ ಕೂಡಿ ಹಾಕ್ತಾರೆ. ಇದೇ ತಾಯಂದಿರು ಮಕ್ಕಳು ಮೊಬೈಲ್ ಹಿಡಿದು ಸೋಫಾದಲ್ಲಿ ಕುಳಿತಿದ್ದರೆ ಏನೂ ಹೇಳುವುದಿಲ್ಲ. ಇದು ತಪ್ಪು” ಎಂದು ಹೇಳಿದರು.
“ಸಿಟಿಯ ಮೊಬೈಲ್ ಮಕ್ಕಳಿಗೆ ಹಾಲು ಎಲ್ಲಿಂದ ಬರುತ್ತೆ ಅಂತ ಕೇಳಿದರೆ ಮಿಲ್ಕ್ ಡೈರಿಯಿಂದ ಎನ್ನುತ್ತಾರೆ. ಹಳ್ಳಿ ಮಕ್ಕಳಿಗೆ ಕೇಳಿದರೆ ಎಮ್ಮೆ, ಹಸು, ಕುರಿ ಎನ್ನುತ್ತಾರೆ. ಬೆಂಗಳೂರಿನಲ್ಲಿ ನಡೆಯುವ ಎಲ್ಲಾ sports ಗಳಲ್ಲೇ ಇರಬಹುದು, ಎಲ್ಲಾ ಕಾಂಪಿಟಿಟೀವ್ ಪರೀಕ್ಷೆಗಳಲ್ಲೂ ಹಳ್ಳಿಗಳಿಂದ ಬರುವ ಮಣ್ಣಿನ ಮಕ್ಕಳೇ ಗೋಲ್ಡ್ ಮೆಡಲ್ ಪಡೆಯುತ್ತಿದ್ದಾರೆ. ಸಿಟಿಗಳ ಮೊಬೈಲ್ ಮಕ್ಕಳು ವಿಡಿಯೊ ಗೇಮ್ ಗಳ ಚಟ, ಡ್ರಗ್ಸ್ ಚಟ ಹತ್ತಿಸಿಕೊಳ್ಳುತ್ತಿದ್ದಾರೆ” ಎಂದರು.
ರಾಜ್ಯ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಬಾಲ ಭವನದ ಅಧ್ಯಕ್ಷರಾದ ಬಿ.ಆರ್.ನಾಯ್ಡು, ತೆಂಗಿನ ನಾರು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ನಟರಾಜ್ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಮಂಗಳೂರಿನ ಬಿಜೈ ಕಾಪಿಕ್ಕಾಡು ಅಂಗನವಾಡಿಯ ಮಕ್ಕಳಿಗೆ ಕೆ.ವಿ.ಪ್ರಭಾಕರ್ ಅವರು ಸಮವಸ್ತ್ರ ವಿತರಿಸಿದರು.