Homeಕರ್ನಾಟಕಬಾಲ್ಯ ವಿವಾಹ | ದೇಶದಲ್ಲಿ ನಮ್ಮ ರಾಜ್ಯ ಎರಡನೇ ಸ್ಥಾನದಲ್ಲಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ಬಾಲ್ಯ ವಿವಾಹ | ದೇಶದಲ್ಲಿ ನಮ್ಮ ರಾಜ್ಯ ಎರಡನೇ ಸ್ಥಾನದಲ್ಲಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ಬಾಲ್ಯ ವಿವಾಹ ವಿಚಾರದಲ್ಲಿ ಕರ್ನಾಟಕವು ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಇದು ದುರದೃಷ್ಟಕರ ಬೆಳವಣಿಗೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು.

ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, “ಜವಾಬ್ದಾರಿಯುತ ಸ್ಥಾನದಲ್ಲಿರುವ ಮಂತ್ರಿಯಾಗಿ, ನನಗೂ ತಲೆ ತಗ್ಗಿಸುವ ವಿಚಾರವಿದು. ಬಾಲ್ಯ ವಿವಾಹದಲ್ಲಿ ಬಳ್ಳಾರಿ ಜಿಲ್ಲೆಯು ರಾಜ್ಯಕ್ಕೆ ಪ್ರಥಮ ಹಾಗೂ ಬೆಳಗಾವಿ ಎರಡನೇ ಸ್ಥಾನದಲ್ಲಿದೆ ಎಂದು ಹೇಳಲೂ ನಾಚಿಕೆ ಆಗುತ್ತದೆ” ಎಂದರು.

“ಬಾಲಕಿಯರು ಗರ್ಭಿಣಿಯಾಗುವುದನ್ನು ಹಾಗೂ ಬಾಲ್ಯವಿವಾಹವನ್ನು ಬೇರು ಮಟ್ಟದಿಂದ ಹೋಗಲಾಡಿಸಲು ಕ್ರಮ ವಹಿಸುತ್ತೇವೆ. ಇದಕ್ಕೆಲ್ಲ ನಮ್ಮ ಇಲಾಖೆಯಲ್ಲಿರುವ ದೋಷಗಳು‌ ಮಾತ್ರ ಕಾರಣವಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿಗಳು, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಎಸ್‌ಡಿಎಂಸಿಗಳು, ಕಾನೂನು ಇಲಾಖೆ, ‌ಆರೋಗ್ಯ ಇಲಾಖೆ ಮತ್ತು ಪೊಲೀಸ್‌ ಇಲಾಖೆಗಳ ಸಹಕಾರದಿಂದ ಹಾಗೂ ಎಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಬಾಲ್ಯ ವಿವಾಹ ತಡೆಯಬೇಕಿದೆ” ಎಂದು ಹೇಳಿದರು.

“ಬಾಲ್ಯವಿವಾಹವನ್ನು ಮೂಢನಂಬಿಕೆಯಿಂದ ಮಾಡುತ್ತಾರೋ, ಏನೋ ಎಂದೇ ಗೊತ್ತಾಗುತ್ತಿಲ್ಲ. ಇದನ್ನು ಇರುವ ಜಿಲ್ಲಾ ಮಟ್ಟದ ಸಮಿತಿಗಳು, ವಕೀಲರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಬಾಲ್ಯ ವಿವಾಹದ ವಿಚಾರ ಗೊತ್ತಾದ ತಕ್ಷಣವೇ ಎಫ್‌ಐಆರ್‌ ದಾಖಲಿಸಬೇಕು” ಎಂದು ತಿಳಿಸಿದರು.

ಕರ್ನಾಟಕದಲ್ಲಿ 70ಸಾವಿರಕ್ಕೂ ಅಧಿಕ ಅಂಗನವಾಡಿಗಳಿದ್ದು, ಅವುಗಳಲ್ಲಿ 20 ಸಾವಿರ ಅಂಗನವಾಡಿಗಳಲ್ಲಿ ಸರ್ಕಾರ ಮೊಂಟೆಸ್ಸರಿಗಳನ್ನು ಪ್ರಾರಂಭಿಸಲಿದೆ. ಅಂಗನವಾಡಿ ಕಾರ್ಯಕರ್ತೆಯರಲ್ಲಿ ಸುಮಾರು 15 ಸಾವಿರದಷ್ಟು ಪದವೀಧರೆಯರು ಹಾಗೂ 2 ಸಾವಿರದಷ್ಟು ಸ್ನಾತಕೋತ್ತರ ಪದವೀಧರೆಯರು ಇದ್ದಾರೆ. ಇವರಿಗೆ ಇನ್ನಷ್ಟು ತರಬೇತಿ ನೀಡಲಾಗುವುದು” ಎಂದರು.

ವಾಲ್ಮೀಕಿ ನಿಗಮ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, “ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣದ ತನಿಖೆ ಪೂರ್ಣಗೊಳ್ಳಲಿ. ಈ ಬಗ್ಗೆ ಈಗ ಪ್ರತಿಕ್ರಿಯಿಸುವುದು ಸರಿಯಲ್ಲ. ವಿರೋಧ ಪಕ್ಷಗಳು ಮುಖ್ಯಮಂತ್ರಿಯವರ ರಾಜೀನಾಮೆಗೆ ಒತ್ತಾಯಿಸುವುದು ರಾಜಕೀಯ ಪ್ರೇರಿತ. ಮಾಡಬಾರದ ಹಗರಣಗಳನ್ನು ಮಾಡಿದ್ದರಿಂದಲೇ ಬಿಜೆಪಿ ಶಾಸಕರ ಸಂಖ್ಯೆ 60ಕ್ಕೆ ಇಳಿಸಿದೆ. ಏನಾದರೂ ಹೋರಾಟ ಮಾಡಬೇಕು ಎಂಬ ಕಾರಣಕ್ಕೆ ಅವರು ಈ ರೀತಿ ಆರೋಪ ಮಾಡುತ್ತಿದ್ದಾರೆ” ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments