ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಆಗಿರುವ ಅಪಾರ ಪ್ರಮಾಣದ ಹಾನಿಗೆ ವಿಶೇಷ ಪರಿಹಾರ ಕಲ್ಪಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಜೆ ಜಾರ್ಜ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ಪ್ರವಾಹದಿಂದ ಆಗಿರುವ ಹಾನಿ ಮತ್ತು ಪ್ರವಾಹದಿಂದ ಆಗುತ್ತಿರುವ ಸಮಸ್ಯೆಗಳ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದರು.
“ಮುಖ್ಯಮಂತ್ರಿಯವರ ಭೇಟಿಗೆ ಸದ್ಯದಲ್ಲೇ ದಿನಾಂಕ ಮತ್ತು ಸಮಯ ನಿಗದಿಪಡಿಸಲಾಗುವುದು. ಈ ಹಿನ್ನೆಲೆಯಲ್ಲಿ ಮಳೆ ಮತ್ತು ಪ್ರವಾಹದಿಂದ ಆಗಿರುವ ಹಾನಿ ಮತ್ತು ಒಟ್ಟಾರೆ ನಷ್ಟದ ಕುರಿತು ಸಮಗ್ರ ವರದಿ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದ್ದೇನೆ” ಎಂದು ತಿಳಿಸಿದರು.
350 ಮನೆಗಳಿಗೆ ಹಾನಿ
ಮಳೆಹಾನಿ ಕುರಿತಂತೆ ವಿವರಣೆ ನೀಡಿದ ಜಿಲ್ಲಾಧಿಕಾರಿ ಮೀನಾ ನಾಗರಾಜ್, “ಜುಲೈ ತಿಂಗಳಿನಲ್ಲಿ ವಾಡಿಕೆಗಿಂತ ಶೇ. 64ರಷ್ಟು ಹೆಚ್ಚುವರಿ ಮಳೆ ಜಿಲ್ಲೆಯಲ್ಲಿ ಬಂದಿದ್ದು, ಇದರಿಂದ 350 ಮನೆಗಳಿಗೆ ಹಾನಿಯಾಗಿದ್ದು, ಈ ಪೈಕಿ 111 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಉಳಿದ ಮನೆಗಳು ಬಹುತೇಕ ಹಾನಿಗೊಳಗಾಗಿವೆ” ಎಂದು ಹೇಳಿದರು.
“ಕಳೆದ ಎರಡು ದಿನಗಳಲ್ಲಿ ಕುಸಿದಿರುವ ಮನೆಗಳನ್ನು ಹೊರತುಪಡಿಸಿ ಇತರೆ ಹಾನಿಗೊಳಗಾದ ಮನೆಗಳಿಗೆ ಈಗಾಗಲೇ ತಾತ್ಕಾಲಿಕ ಪರಿಹಾರ ನೀಡಲಾಗಿದೆ. ಶೇ. 25ಕ್ಕಿಂತ ಹೆಚ್ಚು ಹಾನಿಗೊಳಗಾದ ಮನೆಗಳಿಗೆ 1.20 ಲಕ್ಷ ರೂ. ಮತ್ತು ಅದಕ್ಕಿಂತ ಕಡಿಮೆ ಹಾನಿಗೊಳಗಾದ ಮನೆಗಳಿಗೆ 6,500 ರೂ. ತಾತ್ಕಾಲಿಕ ಪರಿಹಾರ ವಿತರಿಸಲಾಗಿದೆ” ಎಂದು ಮಾಹಿತಿ ನೀಡಿದರು.
“ಅದೇ ರೀತಿ ರಸ್ತೆ ಮತ್ತು ಸೇತುವೆಗಳಿಗೂ ಹಾನಿಯಾಗಿದ್ದು, ಸುಮಾರು 55 ಕೋಟಿ ರೂ. ಹಾನಿಯಾಗಿದೆ. ಕೆಲವೆಡೆ ಸಂಪರ್ಕ ಕಡಿದಿದ್ದು, ಅಂತಹ ಪ್ರದೇಶಗಳ ಸಂಪರ್ಕಕ್ಕೆ ಬೇರೆ ಮಾರ್ಗಗಳ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ” ಎಂದು ತಿಳಿಸಿದರು.
ಜಿಲ್ಲೆಯನ್ನು ಪ್ರವಾಹ ಪೀಡಿತ ಎಂದು ಘೋಷಿಸುವಂತೆ ಈ ವೇಳೆ ಶಾಸಕರು ಮಾಡಿಕೊಂಡ ಮನವಿಗೆ ಪ್ರತಿಕ್ರಿಯಿಸಿದ ಸಚಿವರು, “ಈವರೆಗೆ ಸರ್ಕಾರ ಈ ರೀತಿ ಘೋಷಣೆ ಮಾಡಿಲ್ಲ. ಘೋಷಣೆ ಮಾಡುವ ವೇಳೆ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.
ಸಭೆಯಲ್ಲಿ ಶಾಸಕರಾದ ಟಿ.ಡಿ.ರಾಜೇಗೌಡ, ಎಚ್.ಡಿ.ತಿಮ್ಮಯ್ಯ, ಜಿ.ಎಚ್.ಶ್ರೀನಿವಾಸ್, ಕೆ.ಎಸ್.ಆನಂದ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಡಾ.ವಿಕ್ರಂ ಅಮಟೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.