ರಾಜ್ಯ ಕಾಂಗ್ರೆಸ್ ಸರ್ಕಾರ, ಹಾಲು-ಮೊಸರಷ್ಟೇ ಅಲ್ಲ; ಈಗ ಮನೆಯ ಕಸಕ್ಕೂ ಕನಿಷ್ಠ ₹400 ವರೆಗೆ ಶುಲ್ಕ ವಿಧಿಸಿ ಗ್ಯಾರಂಟಿ “ಶುಲ್ಕ ವಸೂಲಿಗಾರ ಸರ್ಕಾರʼ ಆಗಿದ್ದು, ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿ ರಾಜ್ಯವನ್ನು ದಿವಾಳಿ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
ದೆಹಲಿಯಲ್ಲಿ ಮಂಗಳವಾರ ಮಾದ್ಯಮದವರೊಂದಿಗೆ ಮಾತನಾಡಿ, “ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗಾಗಿ ಆಸ್ತಿ ತೆರಿಗೆಯಲ್ಲೇ ಅಡಕವಾಗಿದ್ದ ಕಡಿಮೆ ಉಪಕರದ ಬದಲು ಇದೀಗ ಕಟ್ಟಡದ ವಿಸ್ತೀರ್ಣದ ಮೇಲೆ ಸಾವಿರಾರು ರೂಪಾಯಿ ಶುಲ್ಕ ನಿಗದಿಪಡಿಸಿ ಜನಪರ ಬದಲು “ಜನ-ಕರʼ ವಸೂಲಿಗಾರ ಸರ್ಕಾರ ಆಗುತ್ತಿದೆ” ಎಂದು ವಾಗ್ದಾಳಿ ನಡೆಸಿದರು.
“600 ಚದರ ಅಡಿ ನಿವೇಶನದಲ್ಲಿನ ವಸತಿ ಕಟ್ಟಡದ ಪ್ರತಿ ಮನೆಗೆ ಮಾಸಿಕ ₹120ವರೆಗೆ ಶುಲ್ಕ ವಿಧಿಸುತ್ತಿದೆ. ಆಸ್ತಿ ವಿಸ್ತೀರ್ಣ ಹೆಚ್ಚಿದಂತೆ ಬಳಕೆದಾರರ ಶುಲ್ಕವನ್ನೂ ಹೆಚ್ಚಿಸಲಾಗಿದೆ. 4 ಸಾವಿರ ಚದರಡಿ ಮತ್ತು ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದ ಪ್ರತಿ ಮನೆಗೆ ಮಾಸಿಕ ತಲಾ ₹400ರಂತೆ ವಾರ್ಷಿಕ ₹4,800 ಶುಲ್ಕ ವಿಧಿಸುತ್ತಿರುವ ಸರ್ಕಾರದ ಕ್ರಮ ಅಕ್ಷಮ್ಯ” ಎಂದು ಖಂಡಿಸಿದರು.
“ಅಲ್ಲದೆ ಕಟ್ಟಡಗಳಿಗೆ ಪ್ರತಿ ವರ್ಷವೂ ಶೇ.5ರಷ್ಟು ಶುಲ್ಕ ಹೆಚ್ಚಳ ಮಾಡಿದೆ. ಸಾಲದ್ದಕ್ಕೆ ಲಿಫ್ಟ್, ಜನರೇಟರ್ ಪರಿಶೀಲನೆ ಮತ್ತು ರಿನಿವಲ್ಗೆ ₹800 ಇದ್ದ ದರ ಇದೀಗ ಏಕಾಏಕಿ ₹ 5,000 ದಿಂದ ₹8,000 ವರೆಗೆ ಏರಿಸಿ ಜನ-ಕರ ವಸೂಲಿ ಸರ್ಕಾರವಾಗಿದೆ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮೂರು ಮೂರು ಬಾರಿ ಹೆಚ್ಚಳ
“ಕಾಂಗ್ರೆಸ್ ಸರ್ಕಾರ ಹಾಲು, ವಿದ್ಯುತ್, ಪೆಟ್ರೋಲ್, ನೋಂದಣಿ ಶುಲ್ಕ, ಪಹಣಿ ಶುಲ್ಕ, ಅಬಕಾರಿ ಶುಲ್ಕ, ಮುದ್ರಾಂಕ ಶುಲ್ಕ, ಬಸ್ ಪ್ರಯಾಣ ದರ, ಮೆಟ್ರೋ ದರ, ಜನನ-ಮರಣ ಪ್ರಮಾಣ ಪತ್ರ ಶುಲ್ಕ, ಆಸ್ತಿ ತೆರಿಗೆ, ವಾಹನ ತೆರಿಗೆ, ರೋಡ್ ಟ್ಯಾಕ್ಸ್ ಹೀಗೆ ಪ್ರತಿಯೊಂದನ್ನೂ ಮೂರು ಮೂರು ಬಾರಿ ಹೆಚ್ಚಿಸಿ ಜನಸಾಮಾನ್ಯರ ಜೀವ ಹಿಂಡುತ್ತಿದೆ” ಎಂದು ಹರಿಹಾಯ್ದರು.
ಹಾಲು ಉತ್ಪಾದಕರಿಗೆ ಇದ್ದ ಬೆಲೆಯೂ ಕಡಿತ
“ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ 20 ತಿಂಗಳಲ್ಲಿ ಹಾಲು ಉತ್ಪಾದಕರಿಗೆ ಎನ್ನುತ್ತ ಮೂರು ಬಾರಿ ಹಾಲಿನ ದರ ಏರಿಸಿದೆ. ಈ ಸಲ ಅತಿ ಹೆಚ್ಚು ₹4 ಹೆಚ್ಚಿಸಿದೆ. ಆದರೆ, ಇತ್ತ ರೈತರಿಗೆ ಹಾಲಿನ ದರವನ್ನು ಏರಿಸಿಲ್ಲ, ಪ್ರೋತ್ಸಾಹ ಧನವನ್ನೂ ಕೊಟ್ಟಿಲ್ಲ ಬದಲಿಗೆ ಹೈನುಗಾರರಿಗೆ ₹ 3.50 ಕಡಿತ ಮಾಡಿದೆ” ಎಂದು ಜೋಶಿ ಆರೋಪಿಸಿದರು.
₹75-80 ಸಾವಿರ ಕೋಟಿ ವಸೂಲಿ
“ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳಿಗೆ ವಾರ್ಷಿಕವಾಗಿ ಹೆಚ್ಚೆಂದರೆ ₹50-60 ಸಾವಿರ ಕೋಟಿ ವೆಚ್ಚ ಮಾಡುತ್ತಿದೆ. ಆದರೆ, ಬೆಲೆ ಏರಿಕೆ, ಕರ ಹೆಚ್ಚಳ ಎನ್ನುತ್ತ ಜನರಿಂದ ನೇರವಾಗಿ ₹75ರಿಂದ 80 ಸಾವಿರ ಕೋಟಿ ವಸೂಲಿ ಮಾಡುತ್ತಿದೆ. ಇತ್ತ ಜನಸಾಮಾನ್ಯರಿಗೆ ಗ್ಯಾರೆಂಟಿಗಳನ್ನೂ ಸರಿ ಕೊಡುತ್ತಿಲ್ಲ, ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದೆ” ಎಂದು ದೂರಿದರು.
ಹುಬ್ಬಳ್ಳಿಯಲ್ಲಿ ಮುಸ್ಲಿಂ ಏರಿಯಾವೇ ವಕ್ಫ್ ಪಾಲು
“ರಾಜ್ಯದಲ್ಲಿ ಚಾಲುಕ್ಯರ ಆಡಳಿತದಲ್ಲಿ ಇದ್ದಂತಹ ಮಂದಿರಗಳೂ ವಕ್ಫ್ ಆಸ್ತಿ ಎಂದಾಗಿದೆ. ಇನ್ನು, ಹುಬ್ಬಳ್ಳಿಯಲ್ಲಿ ಮುಸಲ್ಮಾನರು ನೆಲೆಸಿರುವ ಇಡೀ ಒಂದು ಪ್ರದೇಶವೇ ವಕ್ಫ್ ಆಸ್ತಿ ಎಂದಾಗಿದೆ. ಈ ಅನ್ಯಾಯದ ವಿರುದ್ಧ ಆಸ್ತಿ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದಾರೆ. ವಕ್ಫ್ನ ಇಂಥ ಭೂ ಕಬಳಿಕೆ ವಿರುದ್ಧ ಬಿಜೆಪಿ ಹೋರಾಡುತ್ತಿದೆ” ಎಂದು ತಿಳಿಸಿದರು.