ನಾಗಮಂಗಲದಲ್ಲಿ ಗಣೇಶನ ಮೆರವಣಿಗೆಯ ಸಂದರ್ಭದಲ್ಲಿ ನಡೆದಿರುವ ಅಹಿತಕರ ಘಟನೆಯ ಬಗ್ಗೆ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದೊಂದಿಗೆ ಚರ್ಚಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಲಾಗಿದೆ ಎಂದು ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವ ಚಲುವರಾಯ ಸ್ವಾಮಿ ತಿಳಿಸಿದರು.
ನಾಗಮಂಗಲ ಎಪಿಎಂಸಿ ಕಚೇರಿಯಲ್ಲಿ ಸಭೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು,”ಘಟನೆಯ ಸಂದರ್ಭದಲ್ಲಿ ಕೆಲವು ಅಂಗಡಿ ಮುಂಗಟ್ಟುಗಳಿಗೆ ಹಾನಿಯಾಗಿದ್ದು ಅವನ್ನು ಪರಿಶೀಲನೆ ನಡೆಸಲಾಗುವುದು” ಎಂದರು.
“ಈ ಪ್ರಕರಣದ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರೊಂದಿಗೆ ಚರ್ಚಿಸಿದ್ದೇನೆ. ಸಂಬಂಧಿಸಿದ ಆರೋಪಿಗಳನ್ನು ಬಂಧಿಸಲಾಗಿದ್ದು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ” ಎಂದು ಹೇಳಿದರು.
“ನಮ್ಮ ನಾಗಮಂಗಲ ಶಾಂತಿ ಸೌಹಾರ್ದತೆಯ ತಾಣ. ಇಲ್ಲಿ ಯಾವುದೇ ಅನುಚಿತ ಘಟನೆಗೆ ಅವಕಾಶ ಮಾಡಿಕೊಡುವುದಿಲ್ಲ. ನಾನು ಹೊರಗೆ ಹೋಗಿದ್ದೆ. ಊರಿನಿಂದ ಫೋನ್ ಬಂತು ಈ ರೀತಿ ಘಟನೆಯಾಗಿದೆ ಅಂತ. ಕೂಡಲೇ ನಾನು ಎಡಿಜಿಪಿ, ಎಸ್ಪಿಗೆ ಕರೆ ಮಾಡಿದೆ ಮಾಹಿತಿ ಪಡೆದುಕೊಂಡೆ. ಮುಸ್ಲಿಂ ಹಾಗೂ ಹಿಂದೂ ನಡುವೆ ಘರ್ಷಣೆಯಾಗಿದೆ ಎಂದು ಅಧಿಕಾರಿಗಳು ವಿವರಿಸಿದರು” ಎಂದರು.
“ಪೊಲೀಸರು ಕನ್ವಿನ್ಸ್ ಮಾಡುವ ಪ್ರಯತ್ನ ಯಶಸ್ವಿಯಾಗಿದೆ. ಯಾರು ತಪ್ಪಿತಸ್ಥರಿದ್ದಾರೆ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ದುಡುಕುವುದು ಬೇಡ. ದೇವರ ಕೆಲಸ ಈ ರೀತಿಯಾಗಿ ಕಮ್ಯೂನಲ್‌ಗೆ ತಿರುಗುವುದು ಬೇಡ. ಶಾಂತಿ ಕಾಪಾಡುವ ಕೆಲಸ ಎಲ್ಲರದ್ದೂ ಆಗಬೇಕಿದೆ” ಎಂದು ತಿಳಿಸಿದರು.