ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, “ಚನ್ನಪಟ್ಟಣದಲ್ಲಿ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಆ ಸಂದರ್ಭದಲ್ಲಿ ಕ್ಷೇತ್ರದ ಕಾರ್ಯಕರ್ತರು, ಸಾರ್ವಜನಿಕರು ಸೇರಿದ್ದರು. ಎನ್ ಡಿಎ ಮೈತ್ರಿಕೂಟದ ನಾಯಕರು ದೊಡ್ಡ ಪ್ರಮಾಣದಲ್ಲಿ ಸೇರಿದ್ದರು. ಅದು ಐತಿಹಾಸಿಕ ಸಭೆ ಆಗಿತ್ತು. ಇದು ಕಾಂಗ್ರೆಸ್ ನಾಯಕರ ಕಣ್ಣು ಕುಕ್ಕಿದೆ” ಎಂದರು.
“ಈ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ. ಜನ ಕಾರ್ಯಕ್ರಮಕ್ಕೆ ಬರಬಾರದಾ? ಶುಕ್ರವಾರ ನಾಮಪತ್ರ ಸಲ್ಲಿಕೆಯ ನಂತರ ಒಂದು ನೊಟೀಸ್ ಕೊಟ್ಟಿದ್ದಾರೆ. ಬರುವವರ ಮೇಲೆಲ್ಲಾ ಕೇಸ್ ಹಾಕಿಕೊಂಡು ಚುನಾವಣೆ ನಡೆಸಲು ಹೊರಟಿದ್ದಾರೆ ಇವರು. ಶುಕ್ರವಾರ ನಮ್ಮ ಪಕ್ಷದ ಅಧ್ಯಕ್ಷರಿಗೆ ನೋಟಿಸ್ ಕೊಟ್ಟಿದ್ದಾರೆ. ಇದಕ್ಕೆಲ್ಲಾ ನಾವು ಹೆದರುವ ಪ್ರಶ್ನೆ ಇಲ್ಲ. ಜನರ ಬಳಿ ನಾವು ಮತ ಕೇಳುತ್ತೇವೆ. ಅವರೇ ತೀರ್ಪು ಕೊಡುತ್ತಾರೆ” ಎಂದು ಗುಡುಗಿದರು.
“ಸರ್ಕಾರ ಈ ಕಾರ್ಯಕ್ರಮಕ್ಕೆ ಬಂದ ವಾಹನಗಳಿಗೆ ನೋಟಿಸ್ ನೀಡಿದೆ. ಸಿಎಂ, ಡಿಸಿಎಂ ಆದಿಯಾಗಿ ಅವರ ಕಡೆಯಿಂದ ಎಲ್ಲರೂ ಚನ್ನಪಟ್ಟಣಕ್ಕೆ ಹೋಗಿದ್ದರಲ್ಲವೇ? ಹಾಗಿದ್ದರೆ, ಅವರ ಸಭೆಗಳಿಗೆ ಬಂದ ಜನರಿಗೆ ವಾಹನದ ವ್ಯವಸ್ಥೆ ಮಾಡದೇ ಇದ್ದರಾ” ಎಂದು ಪ್ರಶ್ನಿಸಿದರು.
“ನಾವು ಮೂರು ಕ್ಷೇತ್ರ ಗೆದ್ದಾಗಿದೆ ಎಂದು ಸಿಎಂ ಹೇಳುತ್ತಿದ್ದಾರೆ. ಕುಮಾರಸ್ವಾಮಿಯವರ ಭಾವನಾತ್ಮಕ ಮಾತು ಮತ್ತು ಕಣ್ಣೀರು ಜನರಿಗೆ ಬೇಸರವಾಗಿ ಹೋಗಿದೆ ಅಂದಿದ್ದಾರೆ. ಪಾಪ ಇವರು ಎಂದೂ ಜನರ ಮುಂದೆ ಕಣ್ಣೀರು ಹಾಕಿಲ್ಲ. ಹೌದು, ನಾನು ಜನರ ಕಷ್ಟ ನೋಡಿ ಕಣ್ಣೀರು ಹಾಕಿದ್ದೇನೆ. ಇವರು ಅಧಿಕಾರ, ಹಣದ ದುರ್ಬಳಕೆಯಿಂದ ಗೆದ್ದಾಗಿದೆ ಎಂದು ಬೀಗುತ್ತಿದ್ದಾರೆ. ಇವರಿಗೆ ಚನ್ನಪಟ್ಟಣದಲ್ಲಿ ನಿಲ್ಲಿಸೋಕೆ ಕಾಂಗ್ರೆಸ್ ಪಕ್ಷದಿಂದ ಒಬ್ಬ ಅಭ್ಯರ್ಥಿ ಸಿಗಲಿಲ್ಲ. ಬಿಜೆಪಿಯಿಂದ ಅಭ್ಯರ್ಥಿ ಹೈಜಾಕ್ ಮಾಡಿಕೊಂಡು ಹೋಗಿದ್ದಾರೆ. ಇಷ್ಟಾದರೂ ಕುತಂತ್ರ ಬೇರೆ ಮಾಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಇಡೀ ದೇಶಕ್ಕೆ ಕೆಲಸ ಮಾಡುತ್ತಿದ್ದೇನೆ
ಕುಮಾರಸ್ವಾಮಿ ಮಂಡ್ಯಕ್ಕೆ ಮಾತ್ರ ಸೀಮಿತಾರಾಗಿದ್ದಾರೆ ಎಂಬ ಸಿಎಂ ಹೇಳಿಕೆಗೆ ತಿರುಗೇಟು ನೀಡಿ, “ಕಳೆದ ನಾಲ್ಕು ತಿಂಗಳ ನನ್ನ ಟಿಪಿ ನೋಡಿದ್ದಾರಾ? ನನ್ನ ಇಲಾಖೆಗೆ ಸಂಬಂಧಿಸಿ ಹಲವು ರಾಜ್ಯಗಳಿಗೆ ಹೋಗಿದ್ದೇನೆ. ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಅಸ್ಸಾಂ, ಛತ್ತೀಸಗಢ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡಿಗೆ ಹೋಗಿ ಬಂದಿದ್ದೇನೆ. ನಾನು ಎಷ್ಟು ರಾಜ್ಯಗಳಿಗೆ ಹೋಗಿದ್ದೀನಿ ಗೊತ್ತಿದೆಯಾ ಅವರಿಗೆ? ದೆಹಲಿಯಲ್ಲಿ ಸಮಯ ವ್ಯರ್ಥ ಮಾಡದೇ ಕೆಲಸ ಮಾಡುತ್ತಿದ್ದೇನೆ. ಇವರಿಂದ ನಾನು ಸರ್ಟಿಫಿಕೇಟ್ ತೆಗೆದುಕೊಳ್ಳುವ ಅಗತ್ಯ ಇಲ್ಲ. ಹಾಗಾದರೆ, ಕರ್ನಾಟಕಕ್ಕೆ ಬರಲೇಬಾರದಾ ನಾನು? ನನ್ನನ್ನು ಗೆಲ್ಲಿಸಿದ ಜನರ ಕಷ್ಟ ಕೇಳಲು ಬರಲೇಬಾರದಾ? ನಾನು ಕರ್ನಾಟಕಕ್ಕೆ ಬಂದರೆ ಇವರು ನಿದ್ದೆಗೆಡುತ್ತಾರೆ” ಎಂದು ಕಿಡಿಕಾರಿದರು.
ನಿಖಿಲ್ ರೋಡ್ ಷೋನಲ್ಲಿ ನೀತಿ ಸಂಹಿತೆ ಉಲ್ಲಂಘನೆ: ಬಸ್ ಮಾಲೀಕರಿಗೆ ನೋಟಿಸ್
ಚನ್ನಪಟ್ಟಣ ಉಪ ಚುನಾವಣೆಯ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಜೆಡಿಎಸ್ನಿಂದ ನಿಖಿಲ್ ಕುಮಾರಸ್ವಾಮಿ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ನಡೆದ ರೋಡ್ ಷೋ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ, ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಚುನಾವಣಾ ಅಧಿಕಾರಿಗಳು ಆಯೋಜಕರಿಗೆ ನೋಟಿಸ್ ನೀಡಿದ್ದಾರೆ.
ರೋಡ್ ಷೋ ಕಾರ್ಯಕ್ರಮಕ್ಕೆ ವಿವಿಧ ಭಾಗಗಳಿಂದ ಸುಮಾರು ಖಾಸಗಿ 96 ಬಸ್ಗಳಲ್ಲಿ ಜನರನ್ನು ಕರೆತರಲಾಗಿತ್ತು. ಈ ಕುರಿತು ಪರಿಶೀಲನೆ ನಡೆಸಿದಾಗ ಬಸ್ಗಳಿಗೆ ಅನುಮತಿ ಪಡೆಯದಿರುವುದು ಕಂಡುಬಂತು. ಹಾಗಾಗಿ, ಆಯೋಜಕರು ಹಾಗೂ ಬಸ್ಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.