ಚಂದ್ರಶೇಖರ್ ಆತ್ಮಹತ್ಯೆ ವಿಚಾರವಾಗಿ ವಾಲ್ಮೀಕಿ ನಿಗಮದ ಎಂಡಿ ಜೆ ಜೆ ಪದ್ಮನಾಭ ಹಾಗೂ ಲೆಕ್ಕಾಧಿಕಾರಿ ಪರಶುರಾಮ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಸಚಿವ ಬಿ ನಾಗೇಂದ್ರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, “ಈ ಪ್ರಕರಣದಲ್ಲಿ ಯಾರನ್ನು ರಕ್ಷಣೆ ಮಾಡುವ ಪ್ರೆಶ್ನೆಯೇ ಇಲ್ಲ. ನಮ್ಮ ಸರ್ಕಾರದ ಹಣ ನಾವು ದುರುಪಯೋಗ ಆಗಲು ಬಿಡುವುದಿಲ್ಲ” ಎಂದರು.
“88 ಕೋಟಿ ದುರುಪಯೋಗ ಹಣವನ್ನು ಅಧಿಕಾರಿಗಳು ಈಗಾಗಲೇ ಮುಖ್ಯ ಖಾತೆಗೆ ವಾಪಾಸ್ ಪಡೆಯುತ್ತಿದ್ದಾರೆ. ಪ್ರಕರಣವನ್ನು ಮೊನ್ನೆಯೇ ಸಿಐಡಿಗೆ ವಹಿಸಲಾಗಿದೆ. ಶಿವಮೊಗ್ಗ ಮತ್ತು ಬೆಂಗಳೂರು ಎರಡು ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ” ಎಂದು ಹೇಳಿದರು.
“ಸರ್ಕಾರದ ಪೂರ್ವ ಅನುಮತಿ ಪಡೆದು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಎಫ್ಐಆರ್ ಮಾಡಲಾಗಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳ ಮೇಲೆ, ಬ್ಯಾಂಕ್ ಎಂಡಿ & ಸಿಇಓ ಹಾಗೂ ಎಲ್ಲ ನಿರ್ದೇಶಕ ಸೇರಿ ಆರು ಜನ ಬ್ಯಾಂಕ್ ಅಧಿಕಾರಿಗಳ ಮೇಲೆ ಎಫ್ಐಆರ್ ಮಾಡಲಾಗಿದೆ. ಎಫ್. ಎಸ್. ಎಲ್ &ಸಿ. ಐ. ಡಿ ವರದಿ ಬಂದ ತಕ್ಷಣವೇ ಕಾನೂನು ರೀತಿಯಲ್ಲಿ ಎಲ್ಲರಿಗೂ ಕಠಿಣ ಶಿಕ್ಷೆ ಆಗಲಿದೆ” ಎಂದು ತಿಳಿಸಿದರು.