ಕೇಂದ್ರ ಸರ್ಕಾರ ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ಆಹಾರ ಪೂರೈಕೆಗೆ ಲಾಜಿಸ್ಟಿಕ್ಸ್ ವೆಚ್ಚವನ್ನು ಶೇ.8ಕ್ಕೆ ಇಳಿಸುವ ಗುರಿ ಹೊಂದಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನವದೆಹಲಿಯಲ್ಲಿ ಕೇಂದ್ರ ಗೋದಾಮು ನಿಗಮದ (ಸಿಡಬ್ಲ್ಯೂಸಿ) 69ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, “ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ(NLP) ಮತ್ತು PM ಗತಿ ಶಕ್ತಿ ಕಾರ್ಯಕ್ರಮ ಆರಂಭಿಸುವ ಮೂಲಕ ಸರ್ಕಾರ, ಲಾಜಿಸ್ಟಿಕ್ ವೆಚ್ಚವನ್ನು ಶೇ.13 – 14 ರಿಂದ ಶೇ.8ಕ್ಕೆ ಇಳಿಸಲಿದೆ” ಎಂದರು.
“ಕೇಂದ್ರ ಗೋದಾಮು ನಿಗಮ (CWC) ಆಧುನಿಕ ಮೂಲಸೌಕರ್ಯ ಅಭಿವೃದ್ಧಿ ಮತ್ತು ದಕ್ಷತೆ ಹೆಚ್ಚಿಸುವಂತಹ ಉದ್ದೇಶಗಳನ್ನು ಬೆಂಬಲಿಸಲು ಬದ್ಧವಾಗಿದೆ. ಹೀಗಾಗಿ ಗೋದಾಮು ಮತ್ತು ಲಾಜಿಸ್ಟಿಕ್ಸ್ ವಲಯವನ್ನು ದೇಶದ ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲಕ ಎಂದೇ ಪರಿಗಣಿಸಲಾಗಿದೆ” ಎಂದು ತಿಳಿಸಿದರು.
“ಇ-ಕಾಮರ್ಸ್ನ ತ್ವರಿತ ವಿಸ್ತರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯತ್ತ ಸರ್ಕಾರ ಗಮನಹರಿಸಿದೆ. CWC 1957ರಲ್ಲಿ ಪ್ರಾರಂಭ ಆದಾಗಿನಿಂದ ಭಾರತದ ಲಾಜಿಸ್ಟಿಕ್ಸ್ ಮತ್ತು ಆಹಾರ ಪೂರೈಕೆ ಸರಪಳಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಪ್ರಮುಖವಾಗಿದೆ” ಎಂದರು.
“ಆಹಾರ ಧಾನ್ಯಗಳು, ದ್ವಿದಳ ಧಾನ್ಯಗಳು, ಹತ್ತಿ ಮತ್ತು ನೆಲಗಡಲೆ ಸೇರಿದಂತೆ ಅಗತ್ಯ ವಸ್ತುಗಳ ದಕ್ಷ ಗೋದಾಮು, ನಿರ್ವಹಣೆ ಮತ್ತು ಸಾಗಣೆಗೆ ನೇರವಾದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಮತ್ತು ಪ್ರಧಾನ ಮಂತ್ರಿ ಅನ್ನದಾತ ಆಯ್ ಸಂರಕ್ಷಣ್ ಅಭಿಯಾನ (PM-AASHA) ದಲ್ಲಿ CWC ನಿರ್ಣಾಯಕ ಪಾತ್ರ ಪ್ರದರ್ಶಿಸಿದೆ. ಕೇಂದ್ರ ಗೋದಾಮು ನಿಗಮ 700ಕ್ಕೂ ಹೆಚ್ಚು ಗೋದಾಮುಗಳ ವ್ಯಾಪಕ ಜಾಲ ಹೊಂದಿದೆ ಮತ್ತು 148.29 ಲಕ್ಷ ಮೆಟ್ರಿಕ್ ಟನ್ ಸಂಗ್ರಹ ಸಾಮರ್ಥ್ಯದೊಂದಿಗೆ ದಕ್ಷತೆ, ನಾವೀನ್ಯತೆ ಮತ್ತು ವಿಶ್ವಾಸಾರ್ಹತೆಯ ಸಂಕೇತವಾಗಿ ವಿಕಸನಗೊಂಡಿದೆ” ಎಂದು ಹೇಳಿದರು.
ಸಮಾರಂಭದಲ್ಲಿ ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವರಾದ ಬಿ.ಎಲ್. ವರ್ಮಾ ಮತ್ತು ಶ್ರೀಮತಿ ನಿಮುಬೆನ್ ಜಯಂತಿಭಾಯಿ ಬಂಭಾನಿಯಾ ಅವರು ಉಪಸ್ಥಿತರಿದ್ದರು.