ಜಗತ್ತಿನ ರಾಷ್ಟ್ರಗಳ ಎದುರು ಸುದೀರ್ಘ ಕಾಲದ ವರೆಗೆ ಸುರಕ್ಷಿತ ಮತ್ತು ಅಷ್ಟೇ ಗೌರವಯುತವಾದ ವಿದೇಶಾಂಗ ನೀತಿಯನ್ನು ಕಾಪಾಡಿಕೊಂಡು ಬಂದಿದ್ದ ಭಾರತದ ಆಂತರಿಕ ವಿಷಯಗಳಲ್ಲಿ ಇದೀಗ ಅಮೇರಿಕ ದೇಶವು ನೇರವಾಗಿ ಹಸ್ತಕ್ಷೇಪ ಮಾಡಲು ಆರಂಭಿಸಿದ್ದು ಭಾರತವು ಯಾರಿಂದ ಮತ್ತು ಯಾವ ಸಮಯದಲ್ಲಿ ತೈಲವನ್ನು ಖರೀದಿಸಬೇಕು ಎಂಬುದರ ಬಗ್ಗೆಯೂ ಅಮೇರಿಕವೇ ಭಾರತಕ್ಕೆ ಹೇಳುವ ಸ್ಥಿತಿ ಬಂದಿದ್ದು ದೇಶದ ಭದ್ರತೆಯ ದೃಷ್ಟಿಯಿಂದ ಇದೊಂದು ಕಳವಳಕಾರಿ ಬೆಳವಣಿಗೆ ಆಗಿದೆ ಎಂದು ಸಚಿವ ಎಚ್ ಸಿ ಮಹದೇವಪ್ಪ ಹೇಳಿದ್ದಾರೆ.
ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, “ಕಾರಣ ಪ್ರಪಂಚದ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಗತ್ತಿನ ಹಲವು ರಾಷ್ಟ್ರಗಳು ಸೇರಿ ಒಪ್ಪಂದ ಮಾಡಿಕೊಂಡು ವಿಶ್ವಸಂಸ್ಥೆಯನ್ನು ಹುಟ್ಟು ಹಾಕಿದ್ದರೂ ಕೂಡಾ, ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವಾಗಿರುವ ಅಮೇರಿಕ ಮಾತ್ರ ಸಣ್ಣ ಪುಟ್ಟ ರಾಷ್ಟ್ರಗಳ ಮೇಲೆ ನಿಯಂತ್ರಣ ಸಾಧಿಸುವ ನಿಟ್ಟಿನಲ್ಲಿ ಅವರ ಮೇಲೆ ಕಾದಾಡುತ್ತಿದೆ” ಎಂದಿದ್ದಾರೆ.
“ಇತ್ತೀಚಿಗೆ ಬಲವಂತವಾಗಿ ವೆನಿಜುವೆಲ ದೇಶದ ಅಧ್ಯಕ್ಷ ನಿಕೊಲಸ್ ಅವರನ್ನು ಬಂಧಿಸಿದ್ದನ್ನು ನಾವು ಗಮನಿಸಬಹುದು. ಇವರ ಸರ್ವಾಧಿಕಾರಿ ಧೋರಣೆಯು ಯುದ್ಧ ಮತ್ತು ಇನ್ನಿತರೆ ಕೆಟ್ಟ ಸಂದರ್ಭಕ್ಕೆ ಕಾರಣವಾಗಿದೆ” ಎಂದು ಹೇಳಿದ್ದಾರೆ.
“ಇನ್ನು ಪಂಡಿತ್ ನೆಹರೂ ಕಾಲದಿಂದಲೂ ಕೂಡಾ ಅಲಿಪ್ತ ನೀತಿಯನ್ನು ಅನುಸರಿಸಿ ತನ್ನದೇ ಆದ ಆರ್ಥಿಕ, ರಾಜಕೀಯ ಮತ್ತು ರಕ್ಷಣಾ ಶಕ್ತಿಯನ್ನು ಮೈಗೂಡಿಸಿಕೊಂಡಿರುವ ಭಾರತ ದೇಶದ ಆಂತರಿಕ ವ್ಯವಹಾರಗಳ ಬಗ್ಗೆ ಅಮೆರಿಕ ದೇಶವು ತಲೆ ಹಾಕುತ್ತಿರುವುದು ಅತ್ಯಂತ ಆತಂಕದ ಸಂಗತಿ ಆಗಿದ್ದು, ಪ್ರಧಾನಿ ಮೋದಿಯವರ ಬುದ್ಧಿ ರಹಿತವಾದ ನಡೆಯಿಂದ ದೇಶವು ಮುಂದೊಂದು ದಿನ ದೊಡ್ಡ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದ್ದು ಇಂತಹ ದುರ್ಬಲ ನಡೆಯನ್ನು ಎಲ್ಲ ಭಾರತೀಯರು ತೀವ್ರವಾಗಿ ಖಂಡಿಸಬೇಕು” ಎಂದು ತಿಳಿಸಿದ್ದಾರೆ.


