ನೇಹಾ ಕೊಲೆ ಪ್ರಕರಣದ ಆರೋಪಿಯನ್ನು ತಕ್ಷಣ ಬಂಧಿಸಲಾಗಿದೆ. ಪ್ರಕರಣವನ್ನು ಸಿಐಡಿಗೆ ವಹಿಸಿ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದೆ. ಕಾನೂನಿನ ಪ್ರಕಾರ ಕಠಿಣ ಶಿಕ್ಷೆಗೆ ಗುರಿಯಾಗಿಸಲು ಪ್ರಯತ್ನಿಸಲಾಗಿದೆ. ಆದರೆ ಅಮಿತ್ ಶಾ ಅವರು ನೇಹಾ ಕೊಲೆ ಲವ್ ಜಿಹಾದ್ ಎನ್ನುವ ಮೂಲಕ ರಾಜಕೀಯ ಹೇಳಿಕೆ ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.,
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, “ಸುಳ್ಳು ಸುಳ್ಳೇ ಲವ್ ಜಿಹಾದ್ ಎನ್ನುವ ಅಮಿತ್ ಶಾ ಮಣಿಪುರದಲ್ಲಿ ಏನು ಕ್ರಮ ಕೈಗೊಂಡಿದ್ದಾರೆ? ಅಧಿಕಾರ ಉಳಿಸಿಕೊಳ್ಳಲು, ಬಿಜೆಪಿ ಮಾಡಬಾರದ್ದನ್ನು ಮಾಡುತ್ತಿದೆ” ಎಂದು ಕಿಡಿಕಾರಿದರು.
“ಬಿಜೆಪಿಗೆ ಸಂವಿಧಾನ, ಪ್ರಜಾಪ್ರಭುತ್ವ, ಮೀಸಲಾತಿ, ಐಕ್ಯತೆ, ಸಮಾನತೆಯಲ್ಲಿ ನಂಬಿಕೆ ಇಲ್ಲ . ಅಮಾಯಕರ ಕಣ್ಣೀರು, ಅವರಿಗೆ ಕಿರುಕುಳ ಕೊಟ್ಟು ಸಮಾಜ ಒಡೆಯುವುದು ಬಿಜೆಪಿಗೆ ರೂಢಿಯಾಗಿದೆ” ಎಂದರು.
ಪ್ರಜ್ವಲ್ ರೇವಣ್ಣಗೆ ಕೇಂದ್ರ ರಕ್ಷಣೆ
ಕೇಂದ್ರ ಸರ್ಕಾರ ಪ್ರಜ್ವಲ್ ರೇವಣ್ಣ ಅವರನ್ನು ರಕ್ಷಣೆ ಮಾಡುತ್ತಿದೆ. ಯಾರಾದರೂ ಅಂತಾರಾಷ್ಟ್ರೀಯ ಪ್ರಯಾಣ ಮಾಡುವಾಗ ಪಾಸ್ ಪೋರ್ಟ್, ವೀಸಾ ಚೆಕ್ ಆಗುತ್ತದೆ. ಕೇಂದ್ರ ಸರ್ಕಾರಕ್ಕೆ ತಿಳಿಯದಂತೆ ಯಾರೂ ದೇಶದ ಹೊರಗೆ ಹೋಗಲು ಸಾಧ್ಯವಿಲ್ಲ ಸಿದ್ದರಾಮಯ್ಯ ಆರೋಪಿಸಿದರು.